(ನ್ಯೂಸ್ ಕಡಬ) newskadaba.com ಜೂ. 21. ಬೆಂಗಳೂರು ವಿಧಾನಸೌಧದ ಎದುರು ಇಂದು ನಡೆಯಲಿರುವ ರಾಷ್ಟ್ರೀಯ ಯೋಗ ದಿನಾಚರಣೆಗೆ ಅಂತಾರಾಷ್ಟ್ರೀಯ ಯೋಗ ಪಟು ಕಡಬ ತಾಲೂಕಿನ ಏನೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ ಅಕ್ಷಯ ಬಾಬುಬೆಟ್ಟು ಅವರನ್ನು ರಾಜ್ಯ ಸರಕಾರ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿದೆ.
ವಿಧಾನಸೌಧ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸಮ್ಮುಖದಲ್ಲಿ ಇಂದು ಐದು ಸಾವಿರ ಯೋಗ ಪಟುಗಳು ಭಾಗವಹಿಸುವ ಕಾರ್ಯಕ್ರಮದ ಈ ವೇದಿಕೆಯಲ್ಲಿ ಅಕ್ಷಯಳಿಗೆ 5 ನಿಮಿಷ ಯೋಗ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸ್ಪೀಕರ್ ಯು.ಟಿ.ಖಾದರ್ ರವರ ಶಿಫಾರಸ್ಸಿನ ಮೇರೆಗೆ ಸರಕಾರದ ಆಹ್ವಾನದ ಹಿನ್ನೆಲೆಯಲ್ಲಿ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಅವರೊಂದಿಗೆ ವಿದ್ಯಾರ್ಥಿನಿಯ ಪೋಷಕರು ಬೆಂಗಳೂರಿಗೆ ತೆರಳಿದ್ದಾರೆ.
ಏನೆಕಲ್ಲು ಗ್ರಾಮದ ಬಾಲಾಡಿ ನಿವಾಸಿ ಮೋಹನ್ ಕುಮಾರ್ ಹಾಗೂ ದಿವ್ಯ ಅವರ ಪುತ್ರಿಯಾಗಿರುವ ಅಕ್ಷಯ ಏನೆಕಲ್ಲು ನಿರಂತರ ಯೋಗ ಕೇಂದ್ರದಲ್ಲಿ ಯೋಗ ಕಲಿತು ಎಳೆಯ ವಯಸಿನಲ್ಲೇ ಯೋಗದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾಳೆ. ತನ್ನ ಯೋಗ ಸಾಧನೆಗಾಗಿ ಆರು ಚಿನ್ನದ ಪದಕ, ಒಂದು ಬೆಳ್ಳಿ ಪದಕ ಹಾಗೂ ಮೂರು ಕಂಚಿನ ಪದಕ ಗಳಿಸಿದ್ದಾಳೆ.
ಹನುಮಾನಾಸನದಲ್ಲಿ ಒಂದೇ ಸ್ಥಿತಿಯಲ್ಲಿ 50 ನಿಮಿಷ 20 ಸೆಕೆಂಡ್ ಇರುವ ಮೂಲಕ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ಮತ್ತು ಲಂಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರಿನಲ್ಲಿ ವಿಶ್ವದಾಖಲೆ ಮಾಡಿದ್ದಾಳೆ.
9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ 2023ರ ಜುಲೈಯಲ್ಲಿ ಕೋರಮಂಗಲ ದಲ್ಲಿ ನಡೆದ ಚಾಂಪಿಯನ್ ಷಿಪ್‌ನಲ್ಲಿ 6ನೇ ಸ್ಥಾನ, 2023ರ ಆಗಸ್ಟ್‌ನಲ್ಲಿ ಬಿ.ಕೆ.ಎಸ್. ಐಯ್ಯಂಗಾರ್ ಸ್ಮರಣಾರ್ಥ ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಷಿಪ್‌ನಲ್ಲಿ ದ್ವಿತೀಯ ಸ್ಥಾನ, ವಿಶ್ವ ಫಿಟ್ ನೆಸ್ ಫೆಡರೇಷನ್ ಆಫ್ ಯೋಗಾಸನ ಸ್ಪೋರ್ಟ್ಸ್ ನಲ್ಲಿ ಯೋಗಾಸನ ಸ್ಪರ್ಧೆಯಲ್ಲಿ ಸಬ್ ಜೂನಿಯರ್ ಬಾಲಕಿಯರ ವಿಭಾಗದಲ್ಲಿ 7ನೇ ಸ್ಥಾನ, ನಟರಾಜಾಸನದಲ್ಲಿ ಒಂದು ನಿಮಿಷ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ಇಂಟರ್‌ನ್ಯಾಷನಲ್ ಯೋಗ ಬುಕ್ ರೆಕಾರ್ಡ್‌ನಲ್ಲಿ ದಾಖಲೆ, ಯೋಗಾಸನ ಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾ ನಡೆಸಿದ 15ನೇ ಮುಕ್ತ ರಾಷ್ಟ್ರಮಟ್ಟದ ಯೋಗಾಸನ ಚಾಂಪಿಯನ್‌ಷಿಪ್‌ನಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಶಿವಮೊಗ್ಗದ ವರ್ಷಿಣಿ ಯೋಗ ಶಿಕ್ಷಣ ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯೊಂದಿಗೆ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಂಚಿನ ಪದಕ, ಬಿಳಿನೆಲೆಯಲ್ಲಿ ನಡೆದ ಅಂತರ್ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ, ಮೈಸೂರಿನ ದಸರಾದಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ, ಬೆಂಗಳೂರು ಗಂಗಾ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ನಡೆದ ರಾಜ್ಯ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ, ಮೂಡುಬಿದಿರೆಯಲ್ಲಿ ನಡೆದ ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ, ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ, ಮೈಸೂರಿನಲ್ಲಿ 2025ರ ಫೆ. 23ರಂದು ನಡೆದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಂಚಿನ ಪದಕ, 2025ರ ಮೇ 9ರಿಂದ 12ರ ವರೆಗೆ ದುಬೈಯಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿರುವ ಈಕೆಯನ್ನು ವಿವಿಧ ಸಂಘ-ಸಂಸ್ಥೆಗಳು ಸನ್ಮಾನಿಸಿವೆ.













