(ನ್ಯೂಸ್ ಕಡಬ) newskadaba.com ಡಿ. 23 ಶಿವಮೊಗ್ಗ: ಪಶ್ಚಿಮ ಘಟ್ಟದಲ್ಲಿ ಕರ್ನಾಟಕದ 10 ಜಿಲ್ಲೆಗಳಿದ್ದು, ಇದರಲ್ಲಿ 6ರಲ್ಲಿ ಅರಣ್ಯ ನಾಶ ಹೆಚ್ಚಾಗಿದ್ದು, 2013ರಿಂದ 2023ರ ನಡುವೆ ಈ 6 ಜಿಲ್ಲೆಗಳಲ್ಲಿ 153.80 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶ ನಾಶವಾಗಿದೆ ಎಂದು ವರದಿಯಾಗಿದೆ.
ಕೇಂದ್ರ ಸರ್ಕಾರವು ಇತ್ತೀಚೆಗೆ ಬಿಡುಗಡೆ ಮಾಡಿದ ‘ಭಾರತೀಯ ಅರಣ್ಯ ಸ್ಥಿತಿಗತಿ ವರದಿ-2023’ ಪ್ರಕಾರ, ಹೆಚ್ಚು ಅರಣ್ಯ ನಾಶವಾದ ಜಿಲ್ಲೆಗಳಲ್ಲಿ ಶಿವಮೊಗ್ಗ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಒಟ್ಟು 74.54 ಚದರ ಕಿ.ಮೀ., ಕೊಡಗಿನಲ್ಲಿ 33.40 ಚದರ ಕಿ.ಮೀ., ಬೆಳಗಾವಿಯಲ್ಲಿ 24.91 ಚದರ ಕಿ.ಮೀ. ಮತ್ತು ಮೈಸೂರಿನಲ್ಲಿ 15.28 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶ ಇಲ್ಲವಾಗಿದೆ. ಹಾಸನ ಮತ್ತು ಚಾಮರಾಜನಗರದಲ್ಲಿ ಅರಣ್ಯದ ವಿಸ್ತೀರ್ಣ ಕೊಂಚ ಕುಸಿದಿದೆ ಎಂದು ಹೇಳಲಾಗಿದೆ.
ಈ ಎಲ್ಲಾ ಜಿಲ್ಲೆಗಳಲ್ಲಿ ಅತಿದಟ್ಟಾರಣ್ಯದ ವ್ಯಾಪ್ತಿ 2013ರಿಂದ 2023ರ ನಡುವೆ ಹೆಚ್ಚಾಗಿದ್ದು, ದಟ್ಟಾರಣ್ಯದ ವ್ಯಾಪ್ತಿ ಸ್ವಲ್ಪ ಕುಸಿದಿದೆ. ಪಶ್ಚಿಮ ಘಟ್ಟದ ಅಂಚಿನಲ್ಲಿರುವ ಸಾಧಾರಣ ಅರಣ್ಯವು ಜನವಸತಿ ಮತ್ತು ವಾಣಿಜ್ಯ ಬೆಳೆ ಚಟುವಟಿಕೆ ಪ್ರದೇಶಗಳಿಗೆ ಹೊಂದಿಕೊಂಡಿರುವುದರಿಂದ ಇಲ್ಲೇ ಅತಿಹೆಚ್ಚು ಅರಣ್ಯ ನಾಶವಾಗಿರುತ್ತದೆ.