(ನ್ಯೂಸ್ ಕಡಬ) newskadaba.com ಡಿ. 13. ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮುಖಂಡರ ಸಭೆಯು ಗುರುವಾರದಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಬಹಳ ವರ್ಷಗಳಿಂದ ಚರ್ಚೆಯಲ್ಲಿಯೇ ನಗರದ ಅಂಬೇಡ್ಕರ್ ವೃತ್ತದ ಬಗ್ಗೆ ಮಾತನಾಡಿದ ಅವರು, ವೃತ್ತದ ಬಗ್ಗೆ ಚರ್ಚೆಯಲ್ಲಿಯೇ ಇರುವುದು ಶೋಭೆ ತರುವುದಿಲ್ಲ. ಆದಷ್ಟು ಬೇಗ ವೃತ್ತ ನಿರ್ಮಾಣ ಕಾರ್ಯರೂಪಕ್ಕೆ ತರಬೇಕು. ವೃತ್ತ ನಿರ್ಮಾಣಕ್ಕೆ ಬಳಸಲಾಗುವ ಅನುದಾನದ ಬಗ್ಗೆ ಮಹಾನಗರ ಪಾಲಿಕೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕು ಎಂದರು.
ಉಳ್ಳಾಲ ತಾಲೂಕು ತಲಪಾಡಿ ಗ್ರಾಮದಲ್ಲಿರುವ 65 ಸೆಂಟ್ಸ್ ಜಾಗದಲ್ಲಿ ಮಂಜೂರಾಗಿರುವ ಸ್ಮಶಾನ ಭೂಮಿಯಲ್ಲಿ ತಡೆಗೋಡೆ, ಚಿತಾಗಾರ ನಿರ್ಮಾಣವಾಗದೇ ಇರುವುದರಿಂದ ಕುಂದು ಕೊರತೆಗಳನ್ನು ಆಲಿಸಿದ ಅವರು ಮಂಜೂರು ಮಾಡಿದ ಜಾಗದಲ್ಲಿ ಸಮುದಾಯದ ನಡುವೆ ವೈಯಕ್ತಿಕ ಸಮಸ್ಯೆಗಳು ಇದ್ದರೆ ಸಭೆ ನಡೆಸಿ ಸಮಾಧಾಗೊಳಿಸಬೇಕು, ಕೂಡಲೇ ಇದರ ಬಗ್ಗೆ ಪಿಡಿಓ, ಇಓ ಗಳಿಗೆ ಮಾಹಿತಿ ನೀಡಿ ತಹಶೀಲ್ದಾರ್ ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ಮಾಡಿ ತ್ವರಿತಗತಿಯಲ್ಲಿ ಕೆಲಸ ಕಾರ್ಯರೂಪಕ್ಕೆ ತರಬೇಕು ಎಂದರು.
ಪುಣಚ ಗ್ರಾಮ ಪಂಚಾಯತ್‍ನಲ್ಲಿ, 1999ರಲ್ಲಿ ನಿರ್ಮಾಣಗೊಂಡಿದ್ದ ಅಂಬೇಡ್ಕರ್ ಭವನ ಪಾಳು ಬಿದ್ದಿರುವ ಬಗ್ಗೆ ಮುಂದಿನ ಒಂದು ವಾರದ ಒಳಗಡೆ ಕಟ್ಟಡದ ಸ್ಥಿತಿಗತಿಯ ಬಗ್ಗೆ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ತಿಳಿಸಿದರು.
ಸರಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳನ್ನು ಹೊರಗಿನಿಂದ ತರುವಂತೆ ಶಿಫಾರಸ್ಸು ಮಾಡಿದಲ್ಲಿ ಅಥವಾ ಇತರೆ ವೈದ್ಯಕೀಯ ತಪಾಸಣೆಗಳಿಗಾಗಿ ಖಾಸಗಿ ಆಸ್ಪತ್ರೆ ಸಂಸ್ಥೆಗಳನ್ನು ಶಿಫಾರಸ್ಸು ಮಾಡಿದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿದ ದೂರುಗಳನ್ನು ಸ್ಪೀಕರಿಸಲು ದಿನದ 24 ಗಂಟೆಯೂ ಕಾರ್ಯಾಚರಿಸುವ ಕಾಲ್ ಸೆಂಟರ್ ಅನ್ನು ತೆರೆಯಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲೆಯಲ್ಲಿ ಡಿಸಿ ಮನ್ನಾ ಜಾಗದಲ್ಲಿ ವಿವಿಧ ಹಂಚಿಕೆಯಾಗಿ, 166.358 ಎಕರೆ ಉಳಿಕೆ ಜಮೀನು ಇದ್ದು, ಡಿಸಿ ಮನ್ನಾ ಜಾಗವನ್ನು ಸಂಪೂರ್ಣವಾಗಿ ದಲಿತರಿಗೆ ನೀಡುವ ಬಗ್ಗೆ ಯಾವುದೇ ಪ್ರತ್ಯೇಕ ನಿಯಮಾವಳಿಗಳು ಇಲ್ಲದೇ ಇರುವುದರಿಂದ, ಇದನ್ನು ದಲಿತರಿಗೆ ನೀಡಬೇಕು ಎಂಬ ಬೇಡಿಕೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದರು.
ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡುವಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿಯನ್ನು ನೀಡುತ್ತಿಲ್ಲ ಎಂಬ ದೂರಿನ ಬಗ್ಗೆ ಮಾತನಾಡಿದ ಅವರು ಎಲ್ಲಾ ಇಲಾಖೆಯವರು ಕೂಡಲೇ ತಮ್ಮ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಬಗ್ಗೆ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್ ಕೆ. ಅಪರ ಜಿಲ್ಲಾಧಿಕಾರಿ ಡಾ.ಜಿ ಸಂತೋಷ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್, ಡಿಸಿಪಿ ಸಿದ್ಧಾರ್ಥ್ ಗೋಯಲ್, ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವಧನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಮುಖಂಡರು ಉಪಸ್ಥಿತರಿದ್ದರು.