(ನ್ಯೂಸ್ ಕಡಬ) newskadaba.com ಅ.25, ಬೆಂಗಳೂರು: ಗಾಳಿಪಟ ಹಾರಿಸಲು ಚೀನಾದ ಉತ್ಪನ್ನ ಚೀನಿ ದಾರ ಅಥವಾ ಮಾಂಜಾ ದಾರವನ್ನು ಬಳಸುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಕೇವಲ ಹತ್ತಿಯಿಂದ ತಯಾರಿಸಿದ ದಾರವನ್ನು ಮಾತ್ರ ಬಳಸುವಂತೆ ಸೂಚನೆ ನೀಡಿದೆ.
ಇತ್ತೀಚೆಗೆ ಗಾಳಿಪಟ ಹಾರಿಸಲು ಚೀನಿ ದಾರ ಅಥವಾ ಮಾಂಜಾ ದಾರವನ್ನು ಬಳಸುತ್ತಿರುವುದು ಹೆಚ್ಚುತ್ತಿದೆ. ಇವು ಎಷ್ಟೇ ಎಳೆದರೂ ತುಂಡಾಗದ ನೈಲಾನ್ ಮಾದರಿಯ ದಾರಗಳಾಗಿದ್ದು, ಇವು ಪಕ್ಷಿಗಳ ಪ್ರಾಣಕ್ಕೆ ಕಂಟಕವಾಗಿವೆ. ಗಾಳಿಪಟ ಹಾರಿಸುವ ವೇಳೆ ದಾರ ತಾಗಿ ಪಕ್ಷಿಗಳು ಗಾಯಗೊಂಡು ಪ್ರಾಣ ಬಿಟ್ಟಿವೆ. ಹಾಗೇ ಬೈಕ್ ಸವಾರರು ಕೂಡ ಇದರಿಂದ ಹೊರತಾಗಿಲ್ಲ. ಅದರಂತೆ 2016ರಲ್ಲಿ ಕರ್ನಾಟಕ ಸರ್ಕಾರ ಗಾಳಿಪಟ ಹಾರಿಸಲು ನೈಲಾನ್ ಅಥವಾ ಚೀನಿ ದಾರ ಅಥವಾ ಮಾಂಜಾ ದಾರ ಬಳಕೆಯನ್ನು ನಿಷೇಧಿಸಿತು.ಇದೀಗ, ರಾಜ್ಯ ಸರ್ಕಾರ 2016ರ ಅಧಿಸೂಚನೆಗೆ ಕೆಲ ತಿದ್ದುಪಡಿಯನ್ನು ಮಾಡಿ ಆದೇಶ ಹೊರಡಿಸಿದೆ. ಯಾವುದೇ ವ್ಯಕ್ತಿ, ಅಂಗಡಿಗಳು, ಸಗಟು ಮತ್ತು ಚಿಲ್ಲರೆ ಮಾರಾಟಗಾರರು ಚೀನಿ ದಾರ ಅಥವಾ ಮಾಂಜಾ ದಾರ ತಯಾರಿಕೆಗೆ ಬಳಸಲಾಗುವ ನೈಲಾನ್ ಮತ್ತು ಗಾಜು ಮತ್ತಿತರ ಅಪಾಯಕಾರಿ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಚೀನಿ ದಾರ ಅಥವಾ ಮಾಂಜಾ ದಾರ ತಯಾರು, ದಾಸ್ತಾನು ಮಾಡುವುದವುದನ್ನೂ ನಿಷೇಧಿಸಲಾಗಿದೆ. ಒಂದು ವೇಳೆ ಬಳಸಿದ್ದು, ತಯಾರು ಮತ್ತು ಮಾರಾಟ ಮಾಡಿದ್ದು ಕಂಡುಬಂದಲ್ಲಿ ಕಠಿಣಕ್ರಮ ಕೈಗೊಳ್ಳುವುದಾಗಿ ಹೇಳಿದೆ.