ಇಂದಿನಿಂದ ಕುಂದಾಪುರ- ತಿರುಪತಿ ರೈಲು ಸಂಚಾರ ಆರಂಭ

(ನ್ಯೂಸ್ ಕಡಬ) newskadaba.com ಅ. 12. ವಿಜಯದಶಮಿಯ ದಿನದಂದು ಕರಾವಳಿಯಿಂದ ತಿರುಪತಿಗೆ ರೈಲ್ವೇ ಸಂಪರ್ಕ ಆರಂಭವಾಗಲಿದ್ದು, ಈ ಮೂಲಕ ಕರಾವಳಿಗರ ದೀರ್ಘ‌ ಕಾಲದ ಬೇಡಿಕೆ ಈಡೇರಿದಂತಾಗಲಿದೆ. ವಿಸ್ತರಣೆಗೊಂಡ ಕಾಚಿಗುಡ-ರೇಣಿಗುಂಟ-ತಿರುಪತಿ-ಮಂಗಳೂರು ರೈಲಿನ ಮೊದಲ ಓಡಾಟವು ಶನಿವಾರದಂದು ಆರಂಭಗೊಳ್ಳಲಿದೆ. ಈ ರೈಲು ಮುರುಡೇಶ್ವರದಿಂದ ಬುಧವಾರ ಹಾಗೂ ಶನಿವಾರ, ತಿರುಪತಿಯಿಂದ ಮಂಗಳವಾರ ಮತ್ತು ಶುಕ್ರವಾರ ವಾರಕ್ಕೆರಡು ದಿನ ಸಂಚರಿಸಲಿದೆ.

ಅ.12ರ ಶನಿವಾರ ಮುರುಡೇಶ್ವರದಿಂದ ಮಧ್ಯಾಹ್ನ 3.20ಕ್ಕೆ ಹೊರಡುವ ರೈಲು 3.54ಕ್ಕೆ ಬೈಂದೂರು, ಕುಂದಾಪುರಕ್ಕೆ 4. 40, ಬಾರಕೂರು 5, ಉಡುಪಿ 5.20ಕ್ಕೆ, ಮಂಗಳೂರು 7.55ಕ್ಕೆ ತಲುಪಲಿದೆ. ಮಂಗಳೂರಿನಿಂದ ರಾತ್ರಿ 8.05 ಗಂಟೆಗೆ ಹೊರಟ ರೈಲು ತಿರುಪತಿಗೆ ರವಿವಾರ ಬೆಳಗ್ಗೆ 11.30ಕ್ಕೆ ರೇಣಿಗುಂಟ (ತಿರುಪತಿಗೆ) ಹಾಗೂ ಹೈದರಾಬಾದ್‌ನ ಕಾಚಿಗುಡಕ್ಕೆ ಸಂಜೆ 6 ಗಂಟೆಗೆ ತಲುಪಲಿದೆ.

Also Read  ರಾಜ್ಯದಲ್ಲಿ ಕೊರೋನಾ ಮೇಳೈಸುತ್ತಿರುವ ಹಿನ್ನೆಲೆ ➤ ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ | ಪ್ರಥಮ ಪಿಯು ಪರೀಕ್ಷೆ ರದ್ದು

ಕುಂದಾಪುರದಿಂದ ತಿರುಪತಿಗೆ ಸ್ಲೀಪರ್ ಕೋಚ್‌ನಲ್ಲಿ 510 ರೂ. ಹವಾನಿಯಂತ್ರಿತ ಕೋಚ್‌ನಲ್ಲಿ 1,100 ರೂ. ಟಿಕೆಟ್‌ ದರ ಇರಲಿದೆ. ಮಂತ್ರಾಲಯಕ್ಕೆ ಹೋಗುವವರಿಗೂ ಇದು ಅನುಕೂಲಕರವಾಗಿದ್ದು, ದೋನೆ ಜಂಕ್ಷನ್‌ ಸಹಿತ ಹೈದರಾಬಾದ್‌ಗೂ ರೈಲು ಸಂಪರ್ಕ ಪಡೆಯಬಹುದು.

ಕುಂದಾಪುರದಿಂದ ಸಂಜೆ 4.45ರ ಸುಮಾರಿಗೆ ರೈಲು ಹತ್ತಿದರೆ ಮರುದಿನ ಬೆಳಗ್ಗೆ 11.45ಕ್ಕೆ ರೇಣಿಗುಂಟ ನಿಲ್ದಾಣ ತಲುಪಲಿದೆ. ಅಲ್ಲಿ ರೈಲಿನಿಂದಿಳಿದು ಸಂಜೆಯ ದರ್ಶನ ಅಥವಾ ಮರುದಿನ ಬೆಳಗ್ಗೆ ತಿಮ್ಮಪ್ಪನ ದರ್ಶನ ಪಡೆದರೆ, ಮರುದಿನ ಸಂಜೆ 4.45ಕ್ಕೆ ಇದೇ ರೈಲು ರೇಣಿಗುಂಟಕ್ಕೆ ಬಂದು ಉಡುಪಿ ಕಡೆ ಹೊರಡಲಿದೆ. ಈ ರೈಲಿನ ಮೊದಲ ಓಡಾಟವನ್ನು ಸ್ವಾಗತಿಸಲು ಕರಾವಳಿಯ ವಿವಿಧ ನಿಲ್ದಾಣಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ರೈಲಿಗಾಗಿ ಸಂಸದರ ಮೂಲಕ ನಿರಂತರ ಹೋರಾಟ ಸಂಘಟಿಸಿದ ಕುಂದಾಪುರ ರೈಲು ಹಿತರಕ್ಷಣಾ ಸಮಿತಿಯೂ ಶನಿವಾರ 4 ಗಂಟೆಗೆ ರೈಲನ್ನು ಸ್ವಾಗತಿಸಲು ಕುಂದಾಪುರ ನಿಲ್ದಾಣದಲ್ಲಿ ಸಿದ್ಧತೆ ಮಾಡಿಕೊಂಡಿದೆ.

Also Read  ಅಬಕಾರಿ ನೀತಿ ಪ್ರಕರಣ  ಬಿಆರ್‌ಎಸ್ ನಾಯಕಿ ಕೆ ಕವಿತಾಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್

error: Content is protected !!
Scroll to Top