ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರ- ಬಿಜೆಪಿ ಪಕ್ಷದ ಹಿಡನ್ ಅಜೆಂಡಾ; ಅಪ್ಸರ್ ಕೊಡ್ಲಿಪೇಟೆ ಆಕ್ಷೇಪ

(ನ್ಯೂಸ್ ಕಡಬ) newskadaba.com ಶಿಗ್ಗಾವಿ, ಸೆ. 14. ವಕ್ಫ್ ಕಾಯ್ದೆಯಲ್ಲಿ ತಿದ್ದುಪಡಿ ತಂದಿರುವ ಕೆಂದ್ರ ಸರಕಾರದ ವಿರುದ್ದ ಎಸ್ಡಿಪಿಐ ವತಿಯಿಂದ ಹಾವೇರಿ ಜಿಲ್ಲೆಯ ಶಿಗ್ಗಾವಿಯಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ವಕ್ಫ್ ಆಸ್ತಿಗಳ ಸಂರಕ್ಷಣೆ ಹಾಗೂ ವಕ್ಫ್ ಸುಧಾರಣೆಗಳ ಹೆಸರಿನಲ್ಲಿ ಇತ್ತೀಚೆಗೆ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ವಕ್ಫ್ ಬಿಲ್ 2024 ತಂದಿರುವುದು ಅತ್ಯಂತ ಆತಂಕಕಾರಿ ವಿಷಯ. ಮುಸ್ಲಿಂ ಸಮುದಾಯದ ಕ್ಷೇಮಾಭಿವೃದ್ಧಿಗೆ ಇರುವ ವಕ್ಫ್ ಆಸ್ತಿಗಳನ್ನು ಕಸಿದುಕೊಳ್ಳುವ ಹುನ್ನಾರ ಬಿಜೆಪಿ ಪಕ್ಷದ ಹಿಡನ್ ಅಜೆಂಡವಾಗಿರುತ್ತದೆ. ಹಾಲಿಯಿರುವ ವಕ್ಫ್ ಕಾಯ್ದೆಗೆ ಸರಿಸುಮಾರು 150 ತಿದ್ದುಪಡಿಗಳನ್ನು ಮಾಡುವ ಮೂಲಕ ಇಡೀ ವಕ್ಫ್ ಕಾಯ್ದೆಯನ್ನೇ ನಾಶಗೊಳಿಸಲು ಈ ವಕ್ಫ್ ಬಿಲ್ – 2024 ತಂದಿರುವುದು. ಇದು ಜಾತ್ಯಾತೀತ ಮೌಲ್ಯಗಳ ವಿರುದ್ಧವಾಗಿದೆ ಹಾಗೂ ತಾರತಾಮ್ಯಗಳೊಂದಿಗೆ ಕೂಡಿದೆ. ಅದುದರಿಂದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಈ ಬಿಲ್ ವಿರುದ್ಧ ತನ್ನ ವಿರೋಧ ವ್ಯಕ್ತಪಡಿಸುತ್ತದೆ ಎಂದು ಹೇಳಿದರು. ಬಳಿಕ ಮಾನ್ಯ ತಹಶೀಲ್ದಾರ್ ಮುಖಾಂತರ ಗೌರವಾನ್ವಿತ ಅಧ್ಯಕ್ಷರು ಮತ್ತು ಸಮಿತಿ ಸದಸ್ಯರು, ಜಂಟಿ ಸಂಸದೀಯ ಸಮಿತಿ, ನವದೆಹಲಿ ಇವರಿಗೆ ಈ ಪ್ರತಿಭಟನೆಯ ಮೂಲಕ ಆಕ್ಷೇಪಣೆಯನ್ನು ಸಲ್ಲಿಸಲಾಯಿತು.

1) ನ್ಯಾಯ ಮಂಡಳಿಯು ನ್ಯಾಯಾಂಗ ವ್ಯವಸ್ಥೆಯ ಸಂಸ್ಥೆಯಾಗಿದ್ದು, ಸದರಿ ವಕ್ಫ್ ಬಿಲ್ ಮಸೂದೆಯು ನ್ಯಾಯಾಂಗ ಮಂಡಳಿಯ ಅಧಿಕಾರವನ್ನು ಕಸಿದುಕೊಳ್ಳುತ್ತದೆ. ಇದು ಸಾಮಾನ್ಯ ಕಾನೂನು ನಿಯಮಕ್ಕೆ ವಿರುದ್ಧವಾಗಿದೆ ಮತ್ತು ಕಾನೂನು ಉಲ್ಲಂಘನೆಯಾಗಿದೆ.
2) ಹಿಂದೂಗಳಲ್ಲದ ಬೌದ್ಧರು, ಜೈನರು ಮತ್ತು ಸಿಖ್ಖರು ಇವರಿಗೂ ಸಹ ದೇವಸ್ಥಾನದ ಆಡಳಿತದ ಸದಸ್ಯತ್ವವನ್ನು ನಿಷೇಧಿಸಿರುವುದರಿಂದ ಹಿಂದೂಗಳಿಗೆ ವಕ್ಫ್ ಮಂಡಳಿಯ ಸದಸ್ಯರಾಗಿ ಜವಾಬ್ದಾರಿ ನೀಡುವುದು ಸಂಪೂರ್ಣ ತಾರತಮ್ಯದಿಂದ ಕೂಡಿದೆ.
3) ವಕ್ಫ್ ಅಧಿಕಾರ ವ್ಯಾಪ್ತಿಯಿಂದ ಶತ್ರುಗಳ ಆಸ್ತಿಗಳೆಂದು ಪರಿಗಣಿಸಿ ಸದರಿ ಆಸ್ತಿಗಳನ್ನು ವಕ್ಫ್ ನಿಯಂತ್ರಣದಿಂದ ಹೊರಗಿಡುವುದು ದೊಡ್ಡ ಪ್ರಮಾಣದ ಹಾನಿಯನ್ನು ಉಂಟುಮಾಡುತ್ತದೆ.
4) ಭೂ ಪರಿವರ್ತನೆಗೆ ನೀಡಿರುವ 90 ದಿನಗಳ ಅವಧಿಯನ್ನು ವಕ್ಫ್ ಭೂಮಿಯ ಅಗಾಧತೆಯ ದೃಷ್ಟಿಕೋನದಲ್ಲಿ ಹೇಳುವುದಾದರೆ, ಅದು ತೀರಾ ಸಾಕಾಗದು. ನಾವು ಅರಿಕೆ ಮಾಡುವುದೇನೆಂದರೆ, ವಕ್ಫ್ ಕಾನೂನಿನ ಉದ್ದೇಶವು ವಕ್ಫ್ ಭೂಮಿಯ ರಕ್ಷಣೆ ಎಂದಾಗಿರುವಾಗ, ಈ ದುರುದ್ದೇಶಿತ ಮಸೂದೆಯು ಮುಸಲ್ಮಾನರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಸಾಲು ಸಾಲು ಕಾನೂನುಗಳ ಸಂದೇಶವನ್ನು ಸಾರುತ್ತಿದೆ. ಮುಸಲ್ಮಾನರು ಕೆಳ ದರ್ಜೆಯವರು ಎಂದು ಬಿಂಬಿಸಿ, ಅವರ ಮೇಲೆ ವಿವಿಧ ಅಸಮಾನ ಕಾನೂನುಗಳನ್ನು ಹೇರಲಾಗುತ್ತಿದೆ. ಈ ಬಗ್ಗೆ ಜಂಟಿ ಸಮಿತಿಯು ಸಕಾಲಿಕ ಮುಂಜಾಗರೂಕತೆಯನ್ನು ಪಾಲಿಸಿ, ಸಮಾಜದ ಹಾಗೂ ದೇಶದ ಹಿತದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ.

ಜಿಲ್ಲಾಧ್ಯಕ್ಷರಾದ ಖಾಸಿಂ ರಬ್ಬಾನಿ ಅಧ್ಯಕ್ಷೀಯ ಭಾಷಣದಲ್ಲಿ ನಿರ್ದಿಷ್ಟವಾಗಿ ಬರೀ ಒಂದು ಕೋಮಿನವರನ್ನ ಗುರಿ ಮಾಡಿಕೊಂಡು ಅವರನ್ನು ತುಳಿಯುವ ಪ್ರಯತ್ನವನ್ನು ಫ್ಯಾಸಿಸ್ಟ್ ಬಿಜೆಪಿ ಸರ್ಕಾರವು ಮಾಡುತ್ತಿದೆ. ನಮ್ಮಿಂದ ನಮ್ಮ 2B ಮೀಸಲಾತಿಯನ್ನು ಕಸಿದುಕೊಳ್ಳಲಾಯಿತು. ಮಸೀದಿ ಮದರಸಾಗಳ ಮೇಲೆ ಬುಲ್ಡೋಜರ್ ಹರಿಸಲಾಯ್ತು. ನಮ್ಮ ಅಕ್ಕ ತಂಗಿಯರ ಹಿಜಾಬ್ ಅನ್ನು ತೆಗೆಸಿದರು. ನಮ್ಮ ಪ್ರವಾದಿಯ ಬಗ್ಗೆ ಕೀಳಾಗಿ ಮಾತನಾಡುವುದು ನಮ್ಮ ಉಲಮಾಗಳನ್ನು ಜೈಲಿಗಟ್ಟುವುದು ಇವರ ಷಡ್ಯಂತ್ರ. ಅದೇ ರಿತಿ ಈಗ ಮತ್ತೊಂದು ವಕ್ಫ್ ಕಾಯಿದೆ ತರಲು ಹೊರಟಿರುವುದು ಇದೆಲ್ಲಾ ಫ್ಯಾಸಿಸ್ಟ್ ಬಿಜೆಪಿ ಸರಕಾರದ ಷಡ್ಯಂತ್ರವೆಂದು ಹೇಳಿದರು.

ಈ ಪ್ರತಿಭಟನಾ ಸಭೆಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷರಾದ ಜಬೀವುಲ್ಲಾ ಹಿರೇಕೆರೂರ, ಪ್ರಧಾನ ಕಾರ್ಯದರ್ಶಿ ಜೀಲಾನಿ ಮೆದೂರ, ಜಿಲ್ಲಾ ಕಾರ್ಯದರ್ಶಿ ಯಾಸಿರ್ ಇರ್ಷಾದ್ ಮತ್ತು ಅಂಜುಮನ್ ಇಸ್ಲಾಂ ಕಮೀಟಿ ಶಿಗ್ಗಾಂವ್ ಉಪಾಧ್ಯಕ್ಷರಾದ ಅಬ್ದುಲ್ ಮಜೀದ್, ಎಸ್ಡಿಪಿಐ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಅಕ್ಬರ್ ಅಲಿ, AIMIM ಶಿಗ್ಗಾಂವ್ ಅಧ್ಯಕ್ಷರಾದ ಅಲ್ತಾಫ್ ದುಕಾಂದಾರ, ಸ್ಥಳೀಯ ಮಸೀದಿ ಧಾರ್ಮಿಕ ಗುರುಗಳಾದ ಮುಖಿಮ್ ಆಶ್ರಫಿ, ರಬ್ಬಾನಿ ಮುವಝನ್ ಹಾಗೂ ಎಸ್ಡಿಪಿಐ ಶಿಗ್ಗಾಂವ್ ವಿಧಾನಸಭಾ ಕ್ಷೇತ್ರದ ನಾಯಕರು ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನೆಯ ಉದ್ದಕ್ಕೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಲಾಯಿತು.

error: Content is protected !!

Join the Group

Join WhatsApp Group