ಪ್ರಯಾಣ ದರ ಹೆಚ್ಚಿಸಿದರೆ ಬಸ್ ಗಳ ಪರ್ಮಿಟ್ ರದ್ದು – ಸಚಿವ ರಾಮಲಿಂಗಾರೆಡ್ಡಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 30. ಖಾಸಗಿ ಬಸ್ ಗಳು ಹಬ್ಬಗಳ ಸಂದರ್ಭದಲ್ಲಿ ಪ್ರಯಾಣದರವನ್ನು ಹೆಚ್ಚಳ ಮಾಡಿದರೆ ಖಾಸಗಿ ಬಸ್‌ ‍ಗಳ ಲೈಸೆನ್ಸ್ ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ ನೀಡಿದ್ದಾರೆ.

 

ಈ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಮಾರ್ಗದರ್ಶನ ನೀಡಿರುವ ಸಚಿವರು, ಖಾಸಗಿ ಬಸ್‌‍ಗಳ ಪ್ರಯಾಣದರದಲ್ಲಿ ನಿಗಾ ವಹಿಸುವಂತೆ ತಾಕೀತು ಮಾಡಿದ್ದಾರೆ. ಗೌರಿ-ಗಣೇಶ, ಯುಗಾದಿ, ನಾಗರಪಂಚಮಿ, ದೀಪಾವಳಿ ಹಾಗೂ ಆಯುಧಪೂಜೆಯಂತಹ ಸಂದರ್ಭಗಳಲ್ಲಿ ಖಾಸಗಿ ಬಸ್ ಗಳು ಪ್ರಯಾಣ ದರಗಳನ್ನು ಮೂರರಿಂದ ನಾಲ್ಕು ಪಟ್ಟು ಏರಿಕೆ ಮಾಡಿ ಹಗಲು ದರೋಡೆಗಿಳಿಯುತ್ತವೆ. 15 ದಿನಕ್ಕೂ ಮೊದಲೇ ಟಿಕೆಟ್‌ ಬುಕ್ಕಿಂಗ್‌ ದರ ಏಕಾಏಕಿ ಹೆಚ್ಚಳವಾಗಿರುತ್ತದೆ. ಇದರಿಂದ ಈ ಬಾರಿ ಎಚ್ಚೆತ್ತುಕೊಂಡ ರಾಜ್ಯಸರ್ಕಾರ ಹಬ್ಬಕ್ಕೂ ಮೊದಲೇ ಕಟ್ಟುನಿಟ್ಟಿನ ಸೂಚನೆಗಳನ್ನು ರವಾನಿಸಿದೆ. ಈ ಹಿಂದಿನ ಸಾಮಾನ್ಯ ದರಕ್ಕಿಂತಲೂ ಅಸಾಮಾನ್ಯವಾಗಿ ಪ್ರಯಾಣದರ ಹೆಚ್ಚಾಗಿದ್ದಲ್ಲಿ ಸದರಿ ಖಾಸಗಿ ಬಸ್‌‍ಗಳ ಮಾಲೀಕರಿಗೆ ನೋಟೀಸ್‌‍ ಕೊಟ್ಟು ವಿಚಾರಣೆ ನಡೆಸುವಂತೆ ತಿಳಿಸಿದ ಅವರು, ದುರುದ್ದೇಶಪೂರಿತವಾಗಿ ಅಥವಾ ನಿಯಮ ಮೀರಿ ಲಾಭದ ಆಸೆಯಿಂದ ಪ್ರಯಾಣ ದರ ಹೆಚ್ಚಳ ಮಾಡಿದರೆ ಅಂತಹ ಬಸ್‌‍ ಗಳ ಪರ್ಮಿಟ್‌ ಅನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

error: Content is protected !!
Scroll to Top