(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.25. ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿಯು ಕೊಡಮಾಡುವ ಪ್ರಸಕ್ತ ಸಾಲಿನ ಮಹಿಳಾ ಸಾಧಕಿ ಪುರಸ್ಕಾರಕ್ಕೆ ಮಂಗಳೂರಿನ ಹಳ್ಳಿ ಮನೆ ರೊಟ್ಟೀಸ್ ಮಾಲಕಿ ಶಿಲ್ಪಾ ಅವರು ಆಯ್ಕೆಯಾಗಿದ್ದಾರೆ.
ದೇಶದಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 16 ಮಹಿಳೆಯರ ಪೈಕಿ ಕರಾವಳಿಯ ಹಳ್ಳಿ ಮನೆ ರೊಟ್ಟೀಸ್ ನ ಶಿಲ್ಪಾ ಓರ್ವರಾಗಿದ್ದಾರೆ. ಮಾರ್ಚ್ 7 ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವುದಕ್ಕಾಗಿ ಶಿಲ್ಪಾ ಅವರಿಗೆ ದೆಹಲಿ ಪ್ರಯಾಣದ ವಿಮಾನ ಟಿಕೆಟ್ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾದ ದಾಖಲಾತಿಗಳು ಅಂಚೆ ಮೂಲಕ ಮನೆಯ ವಿಳಾಸಕ್ಕೆ ಕಳುಹಿಸಿಕೊಡಲಾಗಿದೆ. ಹಾಸನ ಮೂಲದ ಶಿಲ್ಪಾ ಮಂಗಳೂರಿಗೆ ಆಗಮಿಸಿ ಹಲವಾರು ಕಷ್ಟಗಳ ನಡುವೆ ಬೀದಿ ಬದಿ ರೊಟ್ಟಿ ವ್ಯಾಪಾರ ಆರಂಭಿಸಿದ್ದರು. ಶಿಲ್ಪಾ ಅವರ ಹಳ್ಳಿಮನೆ ರೊಟ್ಟಿಸ್ ಸಾಧನೆಯ ಬಗ್ಗೆ ಮಾಧ್ಯಮ ಗಳ ವರದಿಯನ್ನು ಗಮನಿಸಿದ ಮಹೀಂದ್ರ ಸಂಸ್ಥೆಯ ಸಿಇಒ ಆನಂದ್ ಮಹೀಂದ್ರಾರವರು ಇತ್ತೀಚೆಗೆ ಶಿಲ್ಪಾ ಅವರಿಗೆ ಮಹೀಂದ್ರಾ ಪಿಕಪ್ ವಾಹನವೊಂದನ್ನು ಉಡುಗೊರೆಯಾಗಿ ನೀಡಿದ್ದರು. ಅಲ್ಲದೆ ತಾನು ಖುದ್ದಾಗಿ ಹಳ್ಳಿ ಮನೆ ರೊಟ್ಟಿಸ್ ಗೆ ಭೇಟಿ ನೀಡಿ ಶಿಲ್ಪಾರವರ ಕೈರುಚಿಯ ಆಹಾರ ಸವಿಯಲು ಕಾತರನಾಗಿದ್ದೇನೆ ಎಂದೂ ಟ್ವೀಟ್ ಮಾಡಿದ್ದಾರೆ.