(ನ್ಯೂಸ್ ಕಡಬ) newskadaba.com ಕಡಬ, ಫೆ.21. ಕೊಂಬಾರು, ಬಿಳಿನೆಲೆ, ಕೆಂಜಾಳ, ಸಿರಿಬಾಗಿಲು ಭಾಗಗಳ ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆಗಳುಂಟಾದಲ್ಲಿ ವೈದ್ಯಕೀಯ ಚಿಕಿತ್ಸೆಗೆ ಪರದಾಡುವಂತಹ ಪರಿಸ್ಥಿತಿ ಇದ್ದು, ಕೊಂಬಾರಿನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಆರಂಭಿಸಬೇಕೆಂದು ಆಗ್ರಹಿಸಿದ ಘಟನೆ ಕೊಂಬಾರು ಗ್ರಾ.ಪಂ.ನ ಗ್ರಾಮ ಸಭೆಯಲ್ಲಿ ನಡೆದಿದೆ.
ಕೊಂಬಾರು ಗ್ರಾ.ಪಂ.ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಜಿತ್ ಎಸ್. ರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಹಿರಿಯ ಆರೋಗ್ಯ ಸಹಾಯಕಿ ಲಲಿತಾರವರು ಆರೋಗ್ಯ ಇಲಾಖೆಯ ಮಾಹಿತಿಯನ್ನು ನೀಡುತ್ತಿದ್ದಂತೆ ಮಾತನಾಡಿದ ಗ್ರಾ.ಪಂ.ಮಾಜಿ ಸದಸ್ಯ ಚಿದಾನಂದ ದೇವುಪಾಲ್, ದಾಮೋದರ ಗೌಡ, ಶ್ರೀಧರ ಗೌಡ ಕಾಪಾರು ಮೊದಲಾದವರು, ಕೊಂಬಾರು ಬಿಳಿನೆಲೆ ಕೆಂಜಳ, ಸಿರಿಬಾಗಿಲು ಭಾಗಗಳ ಗ್ರಾಮಸ್ಥರಿಗೆ ಆರೋಗ್ಯ ಇಲಾಖೆಯ ಪ್ರತಿಯೊಂದು ಕಾರ್ಯಗಳಿಗೆ ಶಿರಾಡಿ ಆರೋಗ್ಯ ಇಲಾಖೆಗೆ ತೆರಳಲು ತೊಂದರೆಯಾಗುತ್ತಿದೆ. ಇಷ್ಟೊಂದು ದೂರದ ಜನರ ಸಮಸ್ಯೆಗೆ ಅಲ್ಲಿ ಯಾವುದೇ ಸ್ಪಂದನವೂ ಇಲ್ಲದೆ ವೈದ್ಯಾಧಿಕಾರಿಗಳು ಇಲ್ಲದಿದ್ದು ಸಿಬ್ಬಂದಿಗಳ ಕೊರತೆಯನ್ನು ಕಾಡುತ್ತಿದ್ದೇವೆ. ಅಲ್ಲಿ ರೋಗಿಗಳು ಹೋದಲ್ಲಿ ಪರೀಕ್ಷೆ ನಡೆಸಲು ವೈದ್ಯರು ಇಲ್ಲ, ಔಷಧಿ ದಾಸ್ತಾನು ಇಲ್ಲ. ಆದ್ದರಿಂದ ಆಸ್ಪತ್ರೆಯಿಂದ ನಮಗೇನು ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಕೊಂಬಾರಿನಲ್ಲೊಂದು ಸಮುದಾಯ ಆರೋಗ್ಯ ಕೇಂದ್ರ ತೆರೆಯಬೇಕು ಎಂದರು. ಈ ಬಗ್ಗೆ ಈ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ, ಇಲಾಖೆಗಳಿಗೆ ಹಾಗೂ ಸರಕಾರಕ್ಕೆ ಕಳುಹಿಸುವುದರೊಂದಿಗೆ ಮುಂದಿನ ಗ್ರಾಮ ಸಭೆಗೆ ಸೂಕ್ತ ಪರಿಹಾರ ಒದಗಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪುತ್ತೂರು ತಾಲೂಕು ಪಂಚಾಯತ್ ಎನ್.ಆರ್.ಇ.ಜಿ.ಸಹಾಯಕ ನಿರ್ದೇಶಕ ನವೀನ್ ಭಂಡಾರಿ ಚರ್ಚಾ ನಿಯಂತ್ರಣಾಧಿಕಾರಿಯಾಗಿ ಭಾಗವಹಿಸಿದ್ದರು.