(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24. ಬೆಂಗಳೂರು ಮತ್ತು ಕರ್ನಾಟಕದ ಕರಾವಳಿಯನ್ನು ಸಂಪರ್ಕಿಸುವ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಮುರುಡೇಶ್ವರ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದ್ದು, ಇಂದಿನಿಂದ (ಸೆ. 24) ಜಾರಿಗೆ ಬರುವಂತೆ 35 ನಿಮಿಷ ಮುಂಚಿತವಾಗಿ ರೈಲು ಮುರುಡೇಶ್ವರ ತಲುಪಲಿದೆ. ಈ ಕುರಿತು ನೈಋತ್ಯ ರೈಲ್ವೆ ಆದೇಶ ಹೊರಡಿಸಿದೆ.
ಕೆಲವು ದಿನಗಳ ಹಿಂದೆ ರೈಲ್ವೆ ಇಲಾಖೆಯು ಬೆಂಗಳೂರು-ಮೈಸೂರು-ಮಂಗಳೂರು ರೈಲನ್ನು ಮುರುಡೇಶ್ವರ ತನಕ ವಿಸ್ತರಣೆ ಮಾಡಿತ್ತು. ಈ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತಾದರೂ ಪ್ರಯಾಣಿಕರು ರೈಲಿನ ವೇಳಾಪಟ್ಟಿ ಅವೈಜ್ಞಾನಿಕವಾಗಿದೆ ಎಂದು ಹೇಳಿದ್ದರು. ಬೆಂಗಳೂರು-ಮೈಸೂರು-ಮುರುಡೇಶ್ವರ ನಡುವೆ ಸಂಚರಿಸುವ ರೈಲು ನಂಬರ್ 16585 ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಬದಲಾದ ವೇಳಾಪಟ್ಟಿ ಇಂದಿನಿಂದಲೇ ಜಾರಿಗೆ ಬರಲಿದೆ. ರೈಲು ಮಂಗಳೂರು ತಲುಪಿದ ಬಳಿಕ ನಿಧಾನವಾಗಿ ಸಾಗುತ್ತದೆ ಎಂಬುದು ಪ್ರಯಾಣಿಕರ ಆರೋಪವಾಗಿತ್ತು.
ನೈಋತ್ಯ ರೈಲ್ವೆಯ ಮಾಹಿತಿ ಪ್ರಕಾರ ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಮಂಗಳೂರು ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಸುರತ್ಕಲ್ ಮತ್ತು ಮುರುಡೇಶ್ವರ ನಡುವಿನ ವೇಳಾಪಟ್ಟಿಯನ್ನು ಮಾತ್ರ ಪರಿಷ್ಕರಣೆ ಮಾಡಲಾಗಿದೆ. ರೈಲು ನಂಬರ್ 16585 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು-ಮುರುಡೇಶ್ವರ ಡೈಲಿ ಎಕ್ಸ್ ಪ್ರೆಸ್ ರೈಲಿನ ವೇಗವನ್ನು 35 ನಿಮಿಷಗಳಷ್ಟು ಕಾಲ ಹೆಚ್ಚಿಸುವ ಸಲುವಾಗಿ ಸಮಯ ಪರಿಷ್ಕರಣೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.