ದೈಹಿಕ ಆರೋಗ್ಯಕ್ಕೆ ಕಾಳಜಿ ವಹಿಸಿದಷ್ಟು ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಿ- ರವೀಂದ್ರ ಎಂ. ಜೋಶಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 16. ಮಾನವನು ದೈಹಿಕ ಆರೋಗ್ಯಕ್ಕೆ ಒತ್ತು ಕೊಡುವ ರೀತಿಯಲ್ಲೇ ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರ ವಹಿಸುವುದು ಕೂಡ ಮುಖ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ರವೀಂದ್ರ ಎಂ. ಜೋಶಿ ಹೇಳಿದರು. ಅವರು ಇಂದು ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ ಮಾನಸಿಕ ಆರೋಗ್ಯ ಕಾಳಜಿ ಕಾಯ್ದೆ-2017ರ ಅಡಿಯಲ್ಲಿ ಮಾನಸಿಕ ಆರೋಗ್ಯ ಪುನರ್ ವಿಮರ್ಶಾ ಮಂಡಳಿ ಮತ್ತು ನ್ಯಾಯಿಕ ದಂಡಾಧಿಕಾರಿ ಹಾಗೂ ಪೊಲೀಸ್ ಪಾತ್ರದ ಕುರಿತ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಾನಸಿಕ ಅನಾರೋಗ್ಯಕ್ಕೆ ಒಳಗಾದ ವ್ಯಕ್ತಿಯನ್ನು ಸಮಾಜ ಪ್ರತ್ಯೇಕವಾಗಿ ಇಡುವುದು ಸರಿಯಲ್ಲ, ಆ ವ್ಯಕ್ತಿ ಎಲ್ಲರಂತೆ ಬದುಕುವ ಹಕ್ಕು ಇರುತ್ತದೆ. ಮಾನಸಿಕ ರೋಗಗಳಿಗೆ ಒಳಗಾದವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ದಲ್ಲಿ ಅವರು ಆರೋಗ್ಯಯುತವಾಗಿರಲು ಸಾಧ್ಯ ಸಮಾಜ ಇದಕ್ಕೆ ಸ್ಪಂದಿಸಬೇಕು ಎಂದರು. ಸರ್ಕಾರ ಮಾನಸಿಕ ಆರೋಗ್ಯ ಕುರಿತಂತೆ ಅವರ ಒಳಿತಿಗಾಗಿ ಮಾನಸಿಕ ಆರೋಗ್ಯ ಕಾಳಜಿ ಕಾಯ್ದೆ 2017ನ್ನು ಜಾರಿಗೆ ತಂದಿದೆ ಇದರ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಮಾನಸಿಕ ತೊಂದರೆಗೊಳಗಾದ ವ್ಯಕ್ತಿಗೆ ತಾಳ್ಮೆ ಹಾಗೂ ಸಹನೆಯಿಂದ ಸ್ಪಂದಿಸಿ ಅವರ ಮನ ಪರಿವರ್ತನೆಗೆ ವೈದ್ಯರು ಹಾಗೂ ಜನಸಾಮಾನ್ಯರ ಮುಂದೆ ಆಗಬೇಕು ಅವರ ಮೇಲೆ ದೌರ್ಜನ್ಯ ಎಸಗುವುದರಿಂದ ಯಾವುದೇ ಅನುಕೂಲವಾಗದು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ. ಮಾತನಾಡಿ ಮಾನಸಿಕ ಆರೋಗ್ಯ ಕಾಳಜಿ ಕಾಯಿದೆ ವಿಶೇಷವಾಗಿ ಮಾನಸಿಕ ಅಸ್ವಸ್ಥರ ಕಲ್ಯಾಣಕ್ಕಾಗಿ ರೂಪಿಸಲಾಗಿದೆ ಮಾನಸಿಕ ರೋಗಿಗಳಿಗೆ ಯಾವುದೇ ತೊಂದರೆ ನೀಡಿದ್ದಲ್ಲಿ ಈ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದರು. ಕಾರ್ಯಕ್ರಮದಲ್ಲಿ ನಗರ ಉಪ ಪೊಲಿಸ್ ಆಯುಕ್ತರಾದ ಸಿದ್ದಾರ್ಥ್ ಗೋಯಲ್, ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕರಾದ ಡಾ. ಸದಾಶಿವ ಶಾನುಭೋಗ್, ಪೊಲೀಸ್ ಸಿಬ್ಬಂದಿಗಳು, ಮಾನಸಿಕ ವೈದ್ಯಧಿಕಾರಿಗಳು, ಮನೋರೋಗ ವಿದ್ಯಾರ್ಥಿ ವೈದ್ಯರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಮಾನಸಿಕ ಆರೋಗ್ಯ ಪುನರ್ ವಿಮರ್ಶಾ ಮಂಡಳಿ ಬೆಂಗಳೂರು ಮತ್ತು ಮೈಸೂರು ವಿಭಾಗ ಹಾಗೂ ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಿಯಾಜ ಅಹ್ಮದ್ ಎಸ್. ದಫೆದಾರ ಹಾಗೂ ಹಿರಿಯ ನ್ಯಾಯಾಧೀಶರಾದ ಶೋಭಾ ಬಿ.ಜಿ ಉಪನ್ಯಾಸ ನೀಡಿದರು. ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅನುಷ್ಠಾನಾಧಿಕಾರಿ ಡಾ. ಸುದರ್ಶನ್ ಸಿ.ಎಂ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ. ಕೆ. ಉಳೆಪಾಡಿ ನಿರೂಪಿಸಿ, ವಂದಿಸಿದರು.

Also Read  ಬಾಲಕಾರ್ಮಿಕರ ಪತ್ತೆಗೆ ತಪಾಸಣೆ ನಡೆಸಲು ಜಿಲ್ಲಾ ಪಂಚಾಯತ್ ಸಿಇಓ ಸೂಚನೆ

error: Content is protected !!
Scroll to Top