(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.09. ಪ್ರತಿನಿತ್ಯವೂ ಎಲ್ಲ ಕಡೆ ಹಲವು ಮೊಬೈಲ್ ಫೋನ್ ಗಳು ಕಳವಾಗುತ್ತವೆ. ಅವುಗಳಲ್ಲಿ ಕೆಲವು ಪತ್ತೆಯಾದರೆ ಇನ್ನು ಕೆಲವು ಸಿಗುವುದೇ ಇಲ್ಲ. ಪೊಲೀಸರು ಒಂದಷ್ಟು ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ವಾರಸುದಾರರಿಗೆ ಒಪ್ಪಿಸುತ್ತಿರುತ್ತಾರೆ. ಆ ಪೈಕಿ ಈಗ ಕರ್ನಾಟಕ ಪೊಲೀಸರು ಮೊದಲ ಸ್ಥಾನದಲ್ಲಿದ್ದಾರೆ.
ಕಳವಾದ ಇಲ್ಲವೇ ಕಾಣೆಯಾದ ಪೈಕಿ ಅತಿಹೆಚ್ಚು ಮೊಬೈಲ್ ಫೋನ್ ಗಳನ್ನು ಕರ್ನಾಟಕ ಪೊಲೀಸರು ಪತ್ತೆ ಮಾಡಿ ಅವುಗಳನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ಸಿಇಐಆರ್ ಪೋರ್ಟಲ್ ಮೂಲಕ ಕಾರ್ಯಾಚರಣೆ ನಡೆಸಿ ಅವರು ಈ ಮೊಬೈಲ್ ಫೋನ್ ಗಳನ್ನು ಪತ್ತೆ ಹಚ್ಚಿದ್ದರು.
ಕಳವಾದ ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಲೆಂದೇ ಕೇಂದ್ರ ದೂರಸಂಪರ್ಕ ಇಲಾಖೆ ಸೆಂಟ್ರಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ ರಿಜಿಸ್ಟರ್ (ಸಿಇಐಆರ್) ಎಂಬ ಈ ಪೋರ್ಟಲ್ ಆರಂಭಿಸಿದೆ. ಕರ್ನಾಟಕ ಪೊಲೀಸರು ಕಳವಾದ ಇಲ್ಲವೇ ಕಾಣೆಯಾದ 16,232 ಮೊಬೈಲ್ಫೋನ್ಗಳನ್ನು ಈ ಪೋರ್ಟಲ್ ಮೂಲಕ ಪತ್ತೆ ಹಚ್ಚಿದ್ದು, ಅವುಗಳಲ್ಲಿ 8,878 ಫೋನ್‌ಗಳನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ.