(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 10. ಶಿವಾಜಿನಗರದ ಆಜಾಂ ಮಸೀದಿಯಲ್ಲಿ ಬಾಂಬ್ ಇದೆ ಎಂದು ಸುಳ್ಳು ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಬಂಧಿತನನ್ನು ಮಹಾರಾಷ್ಟ್ರ ಮೂಲದ ಸೈಯದ್ ಮಹಮ್ಮದ್ ಅನ್ವರ್(37) ಎಂದು ಗುರುತಿಸಲಾಗಿದೆ. ಜುಲೈ 04ರಂದು ಬೆಂಗಳೂರಿಗೆ ಬಂದಿದ್ದ ಸೈಯದ್, ಮದರಸಾ ಹೆಸರಿನಲ್ಲಿ ಮಸೀದಿಗಳಿಗೆ ತೆರಳಿ ಚಂದಾ ಕೇಳುತ್ತಿದ್ದ. ಅದರಂತೆ ಆಜಾಂ ಮಸೀದಿ ಬಳಿ ಚಂದಾ ಪಡೆದಿದ್ದ ಸೈಯದ್, ರಾತ್ರಿ ಮಸೀದಿಯಲ್ಲಿ ಮಲಗಲು ಅವಕಾಶ ಕೇಳಿದ್ದು, ಇದಕ್ಕೆ ಮಸೀದಿ ಸಿಬ್ಬಂದಿ ನಿರಾಕರಿಸಿದ್ದರು. ಇದರಿಂದ ಬೇಸರಗೊಂಡ ಸೈಯದ್ ಅಜಾಂ ಮಸೀದಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಪೊಲೀಸರಿಗೆ ಹುಸಿ ಕರೆ ಮಾಡಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲಿಸಿದಾಗ ಯಾವುದೇ ಬಾಂಬ್ ಇರಲಿಲ್ಲ. ಘಟನೆಗೆ ಸಂಬಂಧಿಸಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.














