NEET, UPSC ಅಭ್ಯರ್ಥಿಗಳೇ ಎಚ್ಚರ! ನಕಲಿ ಪ್ರಶ್ನೆಪತ್ರಿಕೆ ನೀಡಿ ಲಕ್ಷಾಂತರ ರೂ. ಲೂಟಿ ಮಾಡುತ್ತಿದ್ದ ಜಾಲ ಪದಾಂಗಣಕ್ಕೆ



(ನ್ಯೂಸ್‌ ಕಡಬ) newskadaba.com,  ಜು.07: ನವದೆಹಲಿ: ದೇಶದ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್ (NEET), ಯುಪಿಎಸ್‌ಸಿ (UPSC) ಸಿವಿಲ್ ಸರ್ವೀಸ್, ಎಸ್‌ಎಸ್‌ಸಿ ಸಿಜಿಎಲ್ (SSC CGL), ಎನ್‌ಡಿಎ (NDA) ಹಾಗೂ ಐಬಿಪಿಎಸ್ (IBPS) ಸೇರಿದಂತೆ ವಿವಿಧ ರಾಜ್ಯಗಳ ಬೋರ್ಡ್ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಹೆಸರಿನಲ್ಲಿ ಅಭ್ಯರ್ಥಿಗಳನ್ನು ಗುರಿಯಾಗಿಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸುತ್ತಿದ್ದ ಬೃಹತ್ ಜಾಲವೊಂದು ಪತ್ತೆಯಾಗಿದೆ.







ಪರೀಕ್ಷೆಗೆ ಕೇವಲ ಕೆಲವೇ ಗಂಟೆಗಳ ಮುನ್ನ, “ನಮ್ಮ ಬಳಿ ಅಸಲಿ ಪ್ರಶ್ನೆಪತ್ರಿಕೆ ಇದೆ” ಎಂದು ನಂಬಿಸಿ ಪ್ರತಿ ಅಭ್ಯರ್ಥಿಯಿಂದ ₹50,000 ದಿಂದ ₹1 ಲಕ್ಷದವರೆಗೆ ಹಣ ವಸೂಲಿ ಮಾಡುತ್ತಿದ್ದರು. ಬೋರ್ಡ್ ಪರೀಕ್ಷೆಗಳ ಹೆಸರಿನಲ್ಲಿ ₹500 ರಿಂದ ₹15,000 ವರೆಗೆ ಪಡೆದು ಖಾಸಗಿ ಗ್ರೂಪ್‌ಗಳಿಗೆ ಸೇರಿಸಿ, ಅಂತಿಮವಾಗಿ ನಕಲಿ ಪತ್ರಿಕೆಗಳನ್ನು ನೀಡಿ ವಂಚಿಸುತ್ತಿದ್ದರು.






ಇಂಟರ್ನೆಟ್‌ನ ಕರಾಳ ಜಗತ್ತಾದ ಡಾರ್ಕ್ ವೆಬ್‌ನಲ್ಲಿ “India Exam Papers Hub” ಎಂಬ ಹೆಸರಿನ ಮಾರ್ಕೆಟ್‌ಪ್ಲೇಸ್ ಸೃಷ್ಟಿಸಲಾಗಿತ್ತು. ಇಲ್ಲಿ ಭಾರತದ ಪ್ರಮುಖ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು 60 ರಿಂದ 500 ಅಮೆರಿಕನ್ ಡಾಲರ್‌ಗಳಿಗೆ ಮಾರಾಟಕ್ಕಿಡಲಾಗಿತ್ತು.

ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರಶ್ನೆಪತ್ರಿಕೆ ಸೋರಿಕೆಯ ವದಂತಿ ಅಥವಾ ಸಂದೇಶಗಳನ್ನು ವಿದ್ಯಾರ್ಥಿಗಳು ಧೃಡೀಕರಣವಿಲ್ಲದೆ ನಂಬಬಾರದು.ಇಂತಹ ಅನುಮಾನಾಸ್ಪದ ಟೆಲಿಗ್ರಾಂ ಚಾನೆಲ್ ಅಥವಾ ಡಾರ್ಕ್ ವೆಬ್ ಲಿಂಕ್‌ಗಳು ಕಂಡುಬಂದಲ್ಲಿ ತಕ್ಷಣವೇ ಸ್ಕ್ರೀನ್‌ಶಾಟ್ ತೆಗೆದುಕೊಂಡು ಸೈಬರ್ ಪೊಲೀಸ್ ಅಥವಾ ಸಂಬಂಧಪಟ್ಟ ಪರೀಕ್ಷಾ ಮಂಡಳಿಗಳಿಗೆ ದೂರು ನೀಡಬೇಕು.

ಯಾವುದೇ ಕಾರಣಕ್ಕೂ ಪ್ರಶ್ನೆಪತ್ರಿಕೆಗಾಗಿ ಯಾರಿಗೂ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಹಣ ಪಾವತಿಸಬಾರದು.ಪರೀಕ್ಷಾ ಅವಧಿಯಲ್ಲಿ ಇಂತಹ ವಂಚನೆಗಳನ್ನು ತಡೆಯಲು ಸಾಮಾಜಿಕ ಮಾಧ್ಯಮಗಳು ಹಾಗೂ ಡಾರ್ಕ್ ವೆಬ್ ಲಿಂಕ್‌ಗಳ ಮೇಲೆ ತನಿಖಾ ಸಂಸ್ಥೆಗಳು ನಿರಂತರ ನಿಗಾ ವಹಿಸಬೇಕು ಎಂದು ವರದಿ ಎಚ್ಚರಿಸಿದೆ.

error: Content is protected !!
Scroll to Top