ಉಚಿತ ಕಾನೂನು ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 17. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ವಕೀಲರ ಅಧೀನದಲ್ಲಿ ನಾಲ್ಕು ವರ್ಷಗಳ ಉಚಿತ ಕಾನೂನು ತರಬೇತಿ ಪಡೆಯಲಿಚ್ಚಿಸುವ ಹಿಂದುಳಿದ ವರ್ಗಗಳಾದ ಪ್ರವರ್ಗ-1, 2ಎ ಮತ್ತು 3ಬಿಗೆ ಸೇರಿದ ಕಾನೂನು ಪದವೀಧರರಿಂದ 2023ರ ಜುಲೈ 5ರೊಳಗೆ ಅರ್ಜಿ ಆಹ್ವಾನಿಸಲಾಗಿದೆ.


ಅಭ್ಯರ್ಥಿಯನ್ನು ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿತರಾದ ಕಾನೂನು ಪದವೀಧರರಾಗಿದ್ದು 15 ವರ್ಷಗಳ ಕಾಲ ಕಡಿಮೆ ಅಲ್ಲದ ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸಿರುವ ನ್ಯಾಯವಾದಿಗಳ ಬಳಿ ತರಬೇತಿಗೆ ನಿಯೋಜಿಸಲಾಗುವುದು. ಕುಟುಂಬದ ವಾರ್ಷಿಕ ಆದಾಯ 2.50 ಲಕ್ಷ ರೂ.ಗಳನ್ನು ಮೀರಿರಬಾರದು. (ವರ್ಗ-1ರ ಅಭ್ಯರ್ಥಿಗಳಿಗೆ ಆದಾಯ ಮಿತಿ 3.50 ಲಕ್ಷ ರೂ.). ಪ್ರವರ್ಗ-1ರ ಅಭ್ಯರ್ಥಿಗಳು 40 ವರ್ಷ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು 38 ವರ್ಷದೊಳಗಿನ ಗರಿಷ್ಠ ವಯೋಮಿತಿಯವರಾಗಿದ್ದು, ಅಂತಿಮ ಕಾನೂನು ಪದವಿಯನ್ನು ಪೂರ್ಣಗೊಳಿಸಿ ಎರಡು ವರ್ಷ ಮೀರಿರಬಾರದು. ತರಬೇತಿ ಅವಧಿಯಲ್ಲಿ ಹಾಜರಾತಿಗನುಸಾರವಾಗಿ ಮಾಹೆಯಾನ 4,000 ರೂ. ತರಬೇತಿ ಭತ್ಯೆ ನೀಡಲಾಗುವುದು. ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆನೆಗುಂಡಿ ರೋಡ್, ಬಿಜೈ-ಕಾಪಿಕಾಡ್, ಮಂಗಳೂರು ಈ ಕಚೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿ ಅದರೊಂದಿಗೆ ವರ್ಗಾವಣೆ ಪ್ರಮಾಣ ಪತ್ರದ ಪ್ರತಿ, ಪದವಿ, ಕಾನೂನು ಪದವಿಯ ಅಂಕ ಪಟ್ಟಿಗಳು, ಬಾರ್ ಕೌನ್ಸಿಲ್‍ನಲ್ಲಿ ನೋಂದಾಯಿತರಾಗಿರುವ ಬಗ್ಗೆ ಪ್ರಮಾಣ ಪತ್ರ, ಜಾತಿ ಆದಾಯ ಪ್ರಮಾಣ ಪತ್ರ ಮತ್ತು ಇತ್ತೀಚಿನ ಎರಡು ಭಾವಚಿತ್ರ (ಪಾಸ್‍ಪೋರ್ಟ್ ಸೈಜ್)ಗಳನ್ನು ಲಗತ್ತಿಸಿ ಸಲ್ಲಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕೈಕಂಬ ಸರಕಾರಿ ಶಾಲೆಯ ರಸ್ತೆ ಕಾಂಕ್ರೀಟೀಕರಣಕ್ಕೆ ಚಾಲನೆ

error: Content is protected !!
Scroll to Top