(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ.02. ಕಳೆದ ಡಿ. 21 ರಂದು ಸುಬ್ರಹ್ಮಣ್ಯದಲ್ಲಿ ನಡೆದ ಬಹುಭಾಷಾ ಚಿತ್ರನಟಿ ಮತ್ತು ಸಹನಟನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತು ಮಾಡಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ
ಸುಧೀರ್ ಕುಮಾರ್ ರೆಡ್ಡಿ ಆದೇಶ ನೀಡಿದ್ದಾರೆ.
ಸರ್ಪ ಸಂಸ್ಕಾರಕ್ಕೆಂದು ಬಂದಿದ್ದ ಬಹುಭಾಷಾ ಚಿತ್ರನಟಿ ಉಳಿದುಕೊಂಡಿದ್ದ ಛತ್ರದ ಕೊಠಡಿಗೆ ಸಹನಟ ಬೆಳ್ಳಾರೆಯ ಫರ್ವೇಝ್ ಬಂದಿದ್ದನೆಂಬ ಮಾಹಿತಿಯಂತೆ ಸುಬ್ರಹ್ಮಣ್ಯ ಪೊಲೀಸರು ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಆತನನ್ನೂ ಕರೆಸಿ ಹೊಡೆದಿದ್ದರೆನ್ನಲಾಗಿದೆ. ಈ ಕುರಿತು ತನ್ನ ಮೇಲೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಹನಟಿಯು ವೀಡಿಯೋ ಮೂಲಕ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಳು. ಇದು ವೈರಲ್ ಆಗಿ ದ.ಕ. ಎಸ್ಪಿ ಸುಧೀರ್ ಕುಮಾರ್ ರೆಡ್ಡಿಯವರಿಗೆ ದೊರೆತಿದ್ದು, ಅವರು ತನಿಖೆಗೆ ಆದೇಶ ನೀಡಿದ್ದರು.
ತನಿಖೆ ನಡೆದು ಇದೀಗ ಸುಬ್ರಹ್ಮಣ್ಯ ಠಾಣಾ ಕಾನ್ಸ್‌ಟೇಬಲ್‌ಗಳಾದ ಪ್ರಶಾಂತ್‌ಕುಮಾರ್ ಮತ್ತು ಸಂಧ್ಯಾ ಕುಮಾರಿಯವರು ತಪ್ಪಿತಸ್ಥರೆಂದು ಕಂಡುಬಂದ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತು ಮಾಡಿ ಜಿಲ್ಲಾ ಎಸ್ಪಿಯವರು ಆದೇಶ ಹೊರಡಿಸಿದ್ದಾರೆ.