ರಾಜ್ಯದ ಕೆಲವೆಡೆ ಬಿರುಸಿನ ಮಳೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.25. ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆಯಾಗಿದೆ. ಮಡಿಕೇರಿ ನಗರವೂ ಸೇರಿದಂತೆ ಕೊಡಗು ಜಿಲ್ಲೆಯ ಭಾಗಮಂಡಲ, ಸಂಪಾಜೆ ಸಮೀಪದ ಚೆಂಬು, ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಅಮ್ಮತ್ತಿ, ಸೋಮವಾರಪೇಟೆ ಭಾಗದಲ್ಲಿ ಮಳೆ ಸುರಿದಿದೆ. ಒಣಗಿಸಲು ಕಣದಲ್ಲಿ ಹಾಕಿದ್ದ ಕಾಫಿ ಹಾಗೂ ಕೊಯ್ಲು ಮಾಡಿದ್ದ ಕಾಫಿ ಮಳೆಯಿಂದ ಹಾಳಾಗಿದೆ. ಭಾಗಮಂಡಲದ ಕೆಲವೆಡೆ ಇನ್ನೂ ಭತ್ತದ ಕೊಯ್ಲು ಆಗಿಲ್ಲ. ಮಳೆಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ಜ.27ರಿಂದ ಫೆ.2ರವರೆಗೆ ಸರಾಸರಿಗಿಂತ ಹೆಚ್ಚು ಮಳೆಯಾಗುವ ಸಂಭವ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ನಾಗನಹಳ್ಳಿಯ ಕೃಷಿ ಹವಾಮಾನ ಕ್ಷೇತ್ರ ವಿಭಾಗದ ಪ್ರಕಟಣೆ ತಿಳಿಸಿದೆ. ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿನ ಕೆಲವೆಡೆ, ಮೈಸೂರು ನಗರದಲ್ಲಿ ಹಾಗೂ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಸಾಧಾರಣ ಮಳೆಯಾಗಿದೆ.

Also Read  15ರ ಬಾಲಕನಿಗೆ ಸರ್ಪಕಾಟ - ಎರಡು ತಿಂಗಳ ಅವಧಿಯಲ್ಲಿ 9 ಬಾರಿ ಕಚ್ಚಿದ ನಾಗಪ್ಪ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಎನ್‌.ಆರ್.ಪುರ, ಶೃಂಗೇರಿ ತಾಲ್ಲೂಕಿನಲ್ಲೂ ಮಳೆಯಾಗಿದೆ. ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ, ಫಲ್ಗುಣಿ, ಭಾರತೀಬೈಲ್, ಹುಲ್ಲೇಮನೆ ಸುತ್ತಲಿನ ಪ್ರದೇಶದಲ್ಲಿ ಬಿರುಸಾಗಿ ಸುರಿದಿದೆ. ಇಲ್ಲೂ ಕೂಡ ಕಾಫಿ ಮತ್ತು ಭತ್ತಕ್ಕೆ ಹಾನಿಯಾಗಿದೆ. ಕೊಪ್ಪ ತಾಲ್ಲೂಕಿನಲ್ಲೂ ರಭಸವಾಗಿ ಸುರಿದಿದೆ. ಎನ್‌.ಆರ್‌.ಪುರ, ಶೃಂಗೇರಿ ಭಾಗದಲ್ಲಿ ತುಂತುರು ಮಳೆಯಾಗಿದೆ.

 

error: Content is protected !!
Scroll to Top