(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜ.14. ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಚಿನ್ನಾಭರಣ ಸಹಿತ ನಗದು ದೋಚಿ ಪರಾರಿಯಾದ ಘಟನೆ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ವರದಿಯಾಗಿದೆ. ನೆಲ್ಯಾಡಿಯ ಗೋಳಿತ್ತೊಟ್ಟು ಗ್ರಾಮದ ನಿವಾಸಿ ಸ್ಕರಿಯ ಎಂಬವರ ಮನೆಯಿಂದ ನಗದು ಹಾಗೂ ಚಿನ್ನಾಭರಣ ಕಳವುಗೊಂಡಿದೆ ಎನ್ನಲಾಗಿದೆ.

ಸ್ಕರಿಯ ಅವರು ಚಿಕಿತ್ಸೆಗಾಗಿ ಉಜಿರೆ ಆಸ್ಪತ್ರೆಗೆ ದಾಖಲಾಗಿದ್ದು, ಅಳಿಯ ಕೂಡ ಉಜಿರೆ ಆಸ್ಪತ್ರೆಗೆ ತೆರಳಿದ್ದರು. ಮಗಳು ಮತ್ತು ಮಕ್ಕಳು ಆರ್ಲದಲ್ಲಿನ ಮನೆಗೆ ತೆರಳಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಕಳ್ಳರು ಮನೆಯ ಮುಂಭಾಗದ ಬಾಗಿಲು ಚಿಲಕ ಮುರಿದು ಒಳ ಪ್ರವೇಶಿಸಿ ನಗದು ಹಾಗೂ ಚಿನ್ನಾಭರಣ ದೋಚಿದ್ದಾರೆ. ಈ ವಿಚಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಸರ್ಕಲ್ ಇನ್ಸ್ಪೆಕ್ಟರ್ ರವಿ ಬಿ ಎಸ್, ಉಪ್ಪಿನಂಗಡಿ ಎಸ್.ಐ ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










