(ನ್ಯೂಸ್ ಕಡಬ) newskadaba.com ಬೆಂಗಳೂರು, ಜ.11. ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿದ್ದ ನೈಜೇರಿಯಾದ ಡ್ರಗ್ ಪೆಡ್ಲರ್ ನನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ.
ಬಂಧಿತನನ್ನು ನೈಜೇರಿಯಾದ ಅಗ್ಬು ಚಿಕ್ಕೆ ಅಂಟೋನಿ ಎಂದು ಗುರುತಿಸಲಾಗಿದೆ. ಬಂಧಿತನಿಂದ ಸಿಸಿಬಿ ಪೊಲೀಸರು 25 ಲಕ್ಷ ಮೌಲ್ಯದ ಮಾದಕವಸ್ತು ಹಾಗೂ ಮನೋಪರಿಣಾಮಕ ವಸ್ತುವಾದ 250 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್, ಮೊಬೈಲ್,ಪ್ಯಾಕೇಟ್ ಎಲೆಕ್ಟ್ರಾನಿಕ್ ತೂಕದ ಯಂತ್ರ, 700 ರೂಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರು ತಿಳಿಸಿದ್ದಾರೆ.
ಆರೋಪಿಯು 4 ವರ್ಷಗಳ ಹಿಂದೆ ಬ್ಯುಸಿನೆಸ್ ವೀಸಾ ಪಡೆದು ಭಾರತಕ್ಕೆ ಬಂದಿದ್ದು, ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಗಳಿಸುವ ದುರುದ್ದೇಶದಿಂದ ಗೋವಾದಲ್ಲಿ ನೆಲೆಸಿರುವ ಆಫ್ರಿಕಾ ಮೂಲದ ಪರಿಚಯಸ್ಥ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕ ವಸ್ತುಎಂಡಿಎಂಎ ಕ್ರಿಸ್ಟಲ್ ಅನ್ನು ಖರೀದಿಸಿ ಒಂದು ಗ್ರಾಂ ಗೆ 10ರಿಂದ 12 ಸಾವಿರ ರೂಗಳಂತೆ ಹೆಚ್ಚಿನ ಬೆಲೆಗೆ ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಕಾಲೇಜು ವಿದ್ಯಾರ್ಥಿಗಳಿಗೆ,ಐಟಿ/ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡಿ ಹೆಚ್ಚಿನ ಹಣ ಸಂಪಾದನೆಯಲ್ಲಿ ತೊಡಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಬಂಧಿತ ಆರೋಪಿಯ ವಿರುದ್ದ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಹಾಗೂ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸುತ್ತಿದ್ದಾರೆ ಎಂದು ತಿಳಿಸಿದರು.