(ನ್ಯೂಸ್ ಕಡಬ) newskadaba.com ದಮಾಮ್, ನ.27. ಮನೆ ಕೆಲಸದ ಉದ್ಯೋಗಕ್ಕೆಂದು ಸೌದಿ ಅರೇಬಿಯಕ್ಕೆ ತೆರಳಿ ಸಂಕಷ್ಟಕ್ಕೀಡಾಗಿದ್ದ ಮಂಗಳೂರು ವಾಮಂಜೂರಿನ ಮಹಿಳೆ ವಿಜಯಾ (44) ಇಂದು ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದ ಮೂಲಕ ತವರಿಗೆ ಮರಳಿದ್ದಾರೆ.
ಬಡ ಕುಟುಂಬದ ಆಸರೆಯಾಗಿದ್ದ ವಿಜಯಾ ಅವರು 2015ರಲ್ಲಿ ಸೌದಿ ಅರೇಬಿಯದ ದಮಾಮ್ ಗೆ ತೆರಳಿದ್ದರು. ಮೊದಲ ಮೂರು ತಿಂಗಳ ಕಾಲ ಮಾತ್ರ ಮನೆಯವರೊಂದಿಗೆ ಸಂಪರ್ಕದಲ್ಲಿದ್ದು, ಅನಂತರದ ದಿನಗಳಲ್ಲಿ ವಿಜಯಾ ಸರಿಯಾಗಿ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಇದರಿಂದಾಗಿ ಅನಾರೋಗ್ಯ ಪೀಡಿತ ಪತಿ ಬಾಲಪ್ಪ ಬಾಲಕೃಷ್ಣ ಮತ್ತು ಪುತ್ರ ಜಗಜೀವನ್ ಸಾಕಷ್ಟು ಸಂಕಟ ಮತ್ತು ಆತಂಕಕ್ಕೊಳಗಾಗಿದ್ದರು. ಈ ಬಗ್ಗೆ ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಅವರು ಇಂಡಿಯನ್ ಸೋಶಿಯಲ್ ಫೋರಮ್ ನ ಗಮನಕ್ಕೂ ತಂದಿದ್ದರು. ಹೀಗಾಗಿ ಪ್ರಕರಣವು ಭಾರತೀಯ ರಾಯಭಾರ ಕಚೇರಿಯಲ್ಲಿ ದಾಖಲಾಗಿ ಅವರ ಬಿಡುಗಡೆಗಾಗಿ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಇಂಡಿಯನ್ ಸೋಶಿಯಲ್ ಫೋರಮ್ ಕಾರ್ಯಾಚರಿಸಿತ್ತು. ವಿಜಯಾ ಅವರು ದಮಾಮ್ -ಮುಂಬೈ- ಮಂಗಳೂರು ಮಾರ್ಗವಾಗಿ ವಿಮಾನದಲ್ಲಿ ಮಂಗಳೂರಿಗೆ ಬಂದಿಳಿದಿದ್ದಾರೆ.
ಅವರನ್ನು ಸಂಕಷ್ಟದಿಂದ ಪಾರು ಮಾಡಲು ಇಂಡಿಯನ್ ಸೋಶಿಯಲ್ ಫೋರಮ್ ನಡೆಸಿದ ಕಾರ್ಯವನ್ನು ಕುಟುಂಬಸ್ಥರು ಶ್ಲಾಘಿಸಿದ್ದಾರೆ. ಮಂಗಳೂರಿಗೆ ಬಂದಿಳಿದ ವಿಜಯಾರನ್ನು ಅಥಾವುಲ್ಲಾ ಜೋಕಟ್ಟೆ ನೇತೃತ್ವದ ಎಸ್ ಡಿಪಿಐ ನಿಯೋಗವು ಸ್ವಾಗತಿಸಿತು. ನಿಯೋಗದಲ್ಲಿ ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಥಾವುಲ್ಲಾ ಜೋಕಟ್ಟೆ, ಇಸ್ಮಾಯಿಲ್ ಇಂಜಿನಿಯರ್, ನೂರುಲ್ಲಾ ಕುಳಾಯಿ, ನಾಸಿರ್ ಉಳಾಯಿಬೆಟ್ಟು, ವುಮನ್ಸ್ ಇಂಡಿಯಾ ಮೂವ್ ಮೆಂಟ್ ರಾಜ್ಯ ಕಾರ್ಯದರ್ಶಿ ಆಯಿಶಾ ಬಜ್ಪೆ, ಪಾಪ್ಯುಲರ್ ಫ್ರಂಟ್ ಬಜ್ಪೆ ವಲಯಾಧ್ಯಕ್ಷ ಎ.ಕೆ.ಅಶ್ರಫ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.