(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 06. ಬಿ.ಸಿರೋಡ್ – ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯು ನಡೆಯುತ್ತಿದ್ದು, ಈಗ ಮಳೆ ಇರದ ಕಾರಣ ಇಡೀ ದಿನ ಧೂಳು ತಿನ್ನಬೇಕಾದ ಸಂಕಟ ಪರಿಸರ ನಿವಾಸಿಗಳು ಮತ್ತು ವಾಹನ ಚಾಲಕರ ಅನಿವಾರ್ಯತೆಯಾಗಿದೆ.
ನಿಯಮದಂತೆ ಗುತ್ತಿಗೆದಾರರು ಧೂಳು ಬರದ ಹಾಗೆ ನೀರು ಹಾಯಿಸುತ್ತಾ ಇರಬೇಕಾಗಿದ್ದು, ಇದೀಗ ಅದರ ಉಲ್ಲಂಘನೆಯಾಗುತ್ತಿದ್ದು, ಹೆದ್ದಾರಿ ಇಲಾಖೆಯ ಮೇಲಾಧಿಕಾರಿಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಯಾವಾಗಲಾದರೊಮ್ಮೆ ಮನಸ್ಸಾದರೆ ಮಾತ್ರ ಟ್ಯಾಂಕರ್ ನಲ್ಲಿ ನೀರು ಹಾಯಿಸುತ್ತಾರೆ ಉಳಿದಂತೆ ಹೆಚ್ಚಿನ ಸಮಯ ಧೂಳು ತಿನ್ನಬೇಕಾಗಿದ್ದು ಅದರ ಸಂಕಟ ಪರಿಸರ ನಿವಾಸಿಗಳಿಗೆ ಮತ್ತು ವಾಹನ ಚಾಲಕರಿಗೆ ಮಾತ್ರ ಅನುಭವ. ಪುಟ್ಟ ಮಕ್ಕಳು ಮತ್ತು ಹಿರಿಯ ನಾಗರಿಕರ ಆರೋಗ್ಯದಲ್ಲಿ ಈ ಧೂಳು ಬಹಳ ಗಂಭೀರ ಪರಿಣಾಮ ಬೀರುತ್ತಿದೆ. ಗುತ್ತಿಗೆದಾರರ ನಿರ್ಲಕ್ಷ್ಯತನದ ಬಗ್ಗೆ ಮೇಲಾಧಿಕಾರಿಗಳು ಕೂಡಲೇ ಗಮನಹರಿಸಬೇಕಾಗಿದೆ.