ಧೈರ್ಯ, ನಂಬಿಕೆ ಬರುವವರೆಗೆ ಭಾರತ ಸುಭದ್ರವಾಗಲು ಸಾಧ್ಯವಿಲ್ಲ: ಹುಸೈನ್ ಮು‌ಈ‌ನೀ ಮಾರ್ನಾಡ್ ➤‌ ಎಸ್‌ವೈಎಸ್ ಮಾಣಿ ಸೆಂಟರ್ ನಿಂದ ಅಮೃತ ಭಾರತ ಸಂಗಮ

(ನ್ಯೂಸ್ ಕಡಬ) newskadaba.com ಮಾಣಿ, ಆ. 29. ಭಾರತದ ಅಮೃತ ಮಹೋತ್ಸವದ ಸಲುವಾಗಿ 1942 ರ ಕ್ವಿಟ್ ಇಂಡಿಯಾ ಚಳುವಳಿಯ ಸ್ಮರಣಾರ್ಥ ಎಸ್ ವೈಎಸ್ ಮಾಣಿ ಸೆಂಟರ್ ವತಿಯಿಂದ ಮಿತ್ತೂರು ಜಂಕ್ಷನ್ ನಲ್ಲಿ ‘ಮರೆತ ಭಾರತ’ ಧ್ಯೇಯ ವಾಕ್ಯದೊಂದಿಗೆ ಅಮೃತ ಭಾರತ ಸಂಗಮ ಕಾರ್ಯಕ್ರಮವು ಎಸ್‌ವೈಎಸ್ ಮಾಣಿ ಸೆಂಟರ್ ಅಧ್ಯಕ್ಷರಾದ ಸುಲೈಮಾನ್ ಸಅದಿ ಪಾಟ್ರಕೋಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಭಾಷಣಗಾರರಾಗಿ ಆಗಮಿಸಿದ ಕೆಜಿಎನ್ ದಅವಾ ಕಾಲೇಜಿನ ಪ್ರೊಫೆಸರ್ ಹುಸೈನ್ ಅಹ್ಸನಿ ಅಲ್ ಮುಈನಿ ಮಾರ್ನಾಡ್‌ರವರು ಭಾರತದ ಇತಿಹಾಸವನ್ನು ಮೆಲುಕು ಹಾಕಿ ಭಾರತ ಸ್ವಾತಂತ್ರ್ಯಕ್ಕಾಗಿ ಹಿರಿಯರು ಮಾಡಿದ ತ್ಯಾಗ ಬಲಿದಾನಗಳನ್ನು ಎಳೆಎಳೆಯಾಗಿ ಬಿಡಿಸಿ, ನಮಗೆ ಅವರೊಂದಿಗಿರುವ ಹಕ್ಕುಬಾಧ್ಯತೆಗಳನ್ನು ವಿವರಿಸಿದರು. ಭಾರತವನ್ನಾಳಿದ ಯಾವುದೇ ರಾಜರುಗಳು ಇಸ್ಲಾಮಿಕ್ ರಾಷ್ಟ್ರವನ್ನಾಗಲೀ, ಹಿಂದೂ ರಾಷ್ಟ್ರವನ್ನಾಗಲೀ, ಕ್ರಿಶ್ಚಿಯನ್ ರಾಷ್ಟ್ರವನ್ನಾಗಲೀ ಕಟ್ಟಲಿಲ್ಲ. ಅದು ಸಾಧ್ಯವೂ ಇರಲಿಲ್ಲ ಯಾಕೆಂದರೆ ಭಾರತದ ಪರಂಪರೆ ಆ ರೀತಿಯಲ್ಲಿ ಇತ್ತು. ಇನ್ನು ಯಾರೇ ಅಂತಹ ದುಸ್ಸಾಹಸಕ್ಕೆ ಪ್ರಯತ್ನಪಟ್ಟರೂ ಅವರು ವಿಫಲರಾಗುವುದು ಖಂಡಿತ. ಆದ್ದರಿಂದ ಸತ್ಯ, ನಂಬಿಕೆ, ಧೈರ್ಯ, ಯಾವಾಗ ಅರಳಿ ಹೊಮ್ಮುತ್ತದೋ ಆಗ ಭಾರತ ಸುಭದ್ರವಾಗಲು ಸಾದ್ಯ ಎಂಬ ಸಂದೇಶವನ್ನು ನೀಡಿದರು. ಎಸ್‌ವೈಎಸ್ ರಾಜ್ಯ ಕೌನ್ಸಿಲರ್ ಹಂಝ ಮದನಿ ಮಿತ್ತೂರು ದುಆಃಗೈಯ್ಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಪತ್ರಕರ್ತ ಹಮೀದ್ ಕಂದಕ್ ಪುತ್ತೂರುರವರು ಭಾರತದ ಸ್ವಾತಂತ್ರ್ಯ್ಕಾಗಿ ಹಲವರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ. ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಮರೆಮಾಚಲಾಗುತ್ತಿದೆ ಅದು ಅವರಿಗೆ ಮಾಡುವ ದ್ರೋಹ ಎಂದು ಹೇಳಿದರು. ಜಗತ್ತಿನ ಶ್ರೇಷ್ಠ ಸಂಪತ್ತು ಮಾನವನಲ್ಲಿರುವ ವ್ಯಕ್ತಿತ್ವ. ಅದರ ವಿಕಸನಕ್ಕಾಗಿ ಮಕ್ಕಳಿಗೆ ಮೌಲ್ಯಾಧಾರಿತ ಶಿಸ್ತುಬದ್ಧ ಶಿಕ್ಷಣ ವ್ಯವಸ್ಥೆಗೆ ಒತ್ತು ಕೊಟ್ಟು ಅವರನ್ನು ಬೆಳೆಸಬೇಕು, ವಿವಿಧತೆಯಲ್ಲಿ ಏಕತೆಯನ್ನು ಕಂಡಂತಹ ಭಾರತದ ಇತಿಹಾಸದ ಅರಿವನ್ನು ಮೂಡಿಸಿ ಜಾತಿ, ಮತ, ಭೇದವಿಲ್ಲದೆ ಸೌಹಾರ್ದ ಭಾರತದ ಏಳಿಗೆಗಾಗಿ ಪಣತೊಡಬೇಕೆಂದು ಮುಖ್ಯ ಅತಿಥಿಗಳಾಗಿ ಮಾತನಾಡಿದ ಮಾಣಿ ಗ್ರಾ.ಪಂ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆ ಹೇಳಿದರು. ಇಂದಿನ ಭಾರತದ ಪರಿಸ್ಥಿತಿಯು ಕೋಮುಭಾವನೆಯಿಂದ ಅಧೋಗತಿಗೆ ಇಳಿಯುತ್ತಿದೆ. ಇದರಿಂದ ಹೊರಬರಲು ಯುವಕರು ಪ್ರಾಮಾಣಿಕವಾಗಿ ಮಾತನಾಡುವಂತಾಗಬೇಕು, ನಮ್ಮ ಮಾತು ಕಡಿಮೆಯಾದಲ್ಲಿ ನಮ್ಮ ಹಕ್ಕುಗಳನ್ನು ನಾವೇ ಕಳೆದುಕೊಳ್ಳುತ್ತೇವೆ ಅದಕ್ಕಾಗಿ ಹಿಂಜರಿಯದೆ ಧೈರ್ಯದಿಂದ ಸಮಾಜದಲ್ಲಿ ಮುಂದುವರಿಯಬೇಕೆಂದು ಮಾಣಿ ಗ್ರಾಮ ಪಂಚಾಯತ್ ಸದಸ್ಯರಾದ ಮೆಲ್ವಿನ್ ಕಿಶೋರ್ ಮಾರ್ಟಿಸ್ ಶುಭ ಹೇಳಿದರು. ಮಿತ್ತೂರು ಬ್ರಾಂಚ್ ಎಸ್ ವೈಎಸ್ ಅಧ್ಯಕ್ಷ ಸಿದ್ದೀಕ್ ಸಅದಿ ಮತ್ತು ಎಸ್ ವೈಎಸ್ ಜಿಲ್ಲಾ ಸದಸ್ಯರಾದ ಇಸ್ಮಾಯಿಲ್ ಮಾಸ್ಟರ್ ಮಂಗಿಲಪದವು ಪ್ರಾಸ್ತಾವಿಕ ಭಾಷಣ ಮಾಡಿದರು.

Also Read  ಪೆರುವಾಜೆ :ಕಾಂಕ್ರಿಟೀಕರಣಗೊಂಡ ರಸ್ತೆಯನ್ನು ಉದ್ಘಾಟಿಸಿದ ಸುಳ್ಯ ಶಾಸಕರು

ವೇದಿಕೆಯಲ್ಲಿ ಎಸ್‌ವೈಎಸ್ ದ.ಕ.ಈಸ್ಟ್ ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಯೂಸುಫ್ ಸಯೀದ್ ನೇರಳಕಟ್ಟೆ, ಜಿಲ್ಲಾ ಸಾಂತ್ವನ ಕಾರ್ಯದರ್ಶಿ ಸ್ವಾಲಿಹ್ ಮುರ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಲತೀಫ್ ನೇರಳಕಟ್ಟೆ, ಸೆಂಟರ್ ಉಪಾಧ್ಯಕ್ಷರಾದ ಯೂಸುಫ್ ಹಾಜಿ ಸೂರಿಕುಮೇರು, ಕೋಶಾಧಿಕಾರಿ ದಾವೂದ್ ಕಲ್ಲಡ್ಕ, ಸಾಂತ್ವನ ಕಾರ್ಯದರ್ಶಿ ಸುಲೈಮಾನ್ ಸೂರಿಕುಮೇರು, ಸಾಮಾಜಿಕ ಕಾರ್ಯದರ್ಶಿ ಅಬ್ಬಾಸ್ ಗಡಿಯಾರ ಸಂಘಟನಾ ಕಾರ್ಯದರ್ಶಿ ಹಬೀಬ್ ಶೇರ, ಅಹ್ಮದ್ ಮದನಿ ನೇರಳಕಟ್ಟೆ ಇಸ್ಮಾಯಿಲ್ ಮದನಿ ನೇರಳಕಟ್ಟೆ, ಕೆ.ಜಿ.ಎನ್. ದ‌ಅ್‌ವಾ ಪ್ರಾಧ್ಯಾಪಕರಾದ ಸ್ವಾದಿಕ್ ಮುಈನಿ ಗಡಿಯಾರ, ಯಾಕೂಬ್ ನಚ್ಚಬೆಟ್ಟು, ರಝಾಕ್ ಮುಸ್ಲಿಯಾರ್, ಸಲೀಂ ಮಾಣಿ, ಅಬ್ದುಲ್ ಕರೀಂ ಸೂರಿಕುಮೇರು ಮುಂತಾದವರು ಉಪಸ್ಥಿತರಿದ್ದರು. ಎಸ್‌ವೈಎಸ್ ಮಾಣಿ ಸೆಂಟರ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಪೇರಮೊಗರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎಸ್‌ವೈಎಸ್ ಮಿತ್ತೂರು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ರಝಾಕ್ ಸಅದಿ ವಂದಿಸಿದರು‌. ಕೆಜಿಎನ್ ಜೂನಿಯರ್ ದಅವಾ ವಿದ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.

Also Read  ಐತ್ತೂರು: ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ ರೇಡಿಯೋ ವಿತರಣೆ

error: Content is protected !!
Scroll to Top