ಐಪಿಎಲ್ ಮಾದರಿಯಲ್ಲಿ ವಾಲಿಬಾಲ್ ಲೀಗ್ ಪ್ರಾರಂಭ ➤ ದಾಖಲೆಯ 15 ಲಕ್ಷ ರೂ. ಮೊತ್ತಕ್ಕೆ ಕೊಲ್ಕತ್ತಾ ತಂಡಕ್ಕೆ ಹರಾಜಾದ ಬೆಳ್ತಂಗಡಿಯ ಅಶ್ವಲ್ ರೈ..!

(ನ್ಯೂಸ್ ಕಡಬ) newskadaba.com ಕೊಚ್ಚಿ, ಡಿ. 15. ಐಪಿಎಲ್ ಮಾದರಿಯಂತೆಯೇ ವಾಲಿಬಾಲ್ ನಲ್ಲೂ ಹೊಸ ಲೀಗ್ ಆರಂಭವಾಗಿದೆ. ಇದರ ಮೊದಲ ಸೀಸನ್ ನ ಹರಾಜು ಪ್ರಕ್ರಿಯೆ ಕೊಚ್ಚಿನ್ ನಲ್ಲಿ ನಡೆದಿದ್ದು, ಬೆಳ್ತಂಗಡಿಯ ವಾಲಿಬಾಲ್ ಆಟಗಾರ ಅಶ್ವಲ್ ರೈ ಅವರನ್ನು 15 ಲಕ್ಷ ರೂ ಮೊತ್ತಕ್ಕೆ ಕೋಲ್ಕತ್ತಾ ಥಂಡಲ್ ಬೋಲ್ಟ್ಸ್ ತಂಡವು ಖರೀದಿಸಿದೆ.

ಅಶ್ವಲ್ ಅವರು ಹುಬ್ಬಳ್ಳಿ ರೈಲ್ವೇಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕ್ರೀಡಾ ಕೋಟಾದಡಿ ಕೆಲಸ ಪಡೆದಿದ್ದಾರೆ. ಇವರು ಬೆಳ್ತಂಗಡಿ ತಾಲೂಕಿನ ಅಚ್ಚಿನಡ್ಕ ನಿವಾಸಿ ನಿವೃತ್ತ ಎಎಸ್ಐ ಸಂಜೀವ ರೈ ಹಾಗೂ ವಾಣಿ ಎಸ್.ರೈ ದಂಪತಿಯ ಪುತ್ರ. ಉಜಿರೆ ಎಸ್ಡಿಎಂಸಿ ಕಾಲೇಜಿನಲ್ಲಿ ಶಿಕ್ಷಣ ಪಡೆದಿದ್ದು, ಅಲ್ಲಿನ ಕ್ರೀಡಾ ತರಬೇತುದಾರ ರಮೇಶ್ ಪಿ.ಡಿ ಅವರ ಮಾರ್ಗದರ್ಶನದೊಂದಿಗೆ ವಾಲಿಬಾಲ್ ಆರಂಭಿಸಿ, ಉತ್ತಮ ಪ್ರದರ್ಶನದೊಂದಿಗೆ ಕಾಲೇಜು ಮಟ್ಟ, ವಲಯ ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಹಾಗೂ ರಾಷ್ಟ್ರ ಮಟ್ಟ ಸಾಧನೆಯೊಂದಿಗೆ ಪುರಸ್ಕೃತರಾಗಿದ್ದಾರೆ. ಪ್ರಸ್ತುತ ಹುಬ್ಬಳ್ಳಿ ರೈಲ್ವೇ ತಂಡ ಹಾಗೂ ಇಂಡಿಯನ್ ರೈಲ್ವೇ ವಾಲಿಬಾಲ್ ತಂಡದ ಕಪ್ತಾನನಾಗಿದ್ದಾರೆ.‌ ಅಶ್ವಲ್ ರೈ 2019ರಲ್ಲಿ ಏಶ್ಯಾದ ಬೆಸ್ಟ್ ಬ್ಲಾಕರ್ ಹಾಗೂ ಸೌತ್ ಏಶ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಸೇರಿದಂತೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಆಟದಲ್ಲಿ ವಿಶೇಷ ಸಾಧನೆ ತೋರಿದ್ದಾರೆ.

ವಾಲಿಬಾಲ್ ಲೀಗ್ ನಲ್ಲಿ ಕ್ಯಾಲಿಕಟ್ ಹೀರೋಸ್, ಕೊಚ್ಚಿ ಬ್ಲೂ ಸ್ಪೈಕರ್ಸ್, ಅಹಮದಾಬಾದ್ ಡಿಫೆಂಡರ್ಸ್, ಹೈದರಾಬಾದ್ ಬ್ಲಾಕ್ ಹಾಕ್ಸ್, ಚೆನ್ನೈ ಬ್ಲಿಟ್ಝ್, ಬೆಂಗಳೂರು ಟಾರ್ಪಿಡೋಸ್ ಮತ್ತು ಕೋಲ್ಕತ್ತಾ ಥಂಡರ್ ಬೋಲ್ಟ್ಸ್ ಎಂಬ ಏಳು ತಂಡಗಳು ಭಾಗವಹಿಸಲಿವೆ.

error: Content is protected !!

Join the Group

Join WhatsApp Group