(ನ್ಯೂಸ್ ಕಡಬ) newskadaba.com ಕೊಪ್ಪಳ, ಜು.21. ಕೊಲೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ರೌಡಿ ಶೀಟರ್ ಓರ್ವನ ಮದುವೆಯಲ್ಲಿ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿ ಹಾರ ಹಾಕಿಸಿಕೊಂಡಿರುವ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಮೂವರು ಅಧಿಕಾರಿಗಳನ್ನು ಸುದೀರ್ಘ ರಜೆಯಲ್ಲಿ ಕಳುಹಿಸಲಾಗಿದೆ.
2015ರ ಜನವರಿಯಲ್ಲಿ ಕೊಪ್ಪಳ ರೇಲ್ವೆ ನಿಲ್ದಾಣದ ಬಳಿ ವಿದ್ಯಾರ್ಥಿಯೋರ್ವನ ಕೊಲೆಯಾಗಿತ್ತು. ಹತ್ಯೆ ಪ್ರಕರಣದಲ್ಲಿ ರೌಡಿಶೀಟರ್ ಹನುಮೇಶ್ ನಾಯಕ್ ಮತ್ತು ಇವರ ಪುತ್ರ ಮಹಾಂತೇಶ ನಾಯಕ್ ಸೇರಿದಂತೆ 9 ಮಂದಿ ಆರೋಪಿಗಳು ಜೈಲಿಗೆ ಹೋಗಿ ಜಾಮೀನು ಮೇಲೆ ಇತ್ತೀಚೆಗಷ್ಟೇ ಹೊರ ಬಂದಿದ್ದರು. ಜು.18ರಂದು ಮಹಾಂತೇಶನ ಮದುವೆಯು ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಗಂಗಾವತಿಯ ಡಿವೈಎಸ್ಪಿ ರುದ್ರೇಶ್ ಉಜ್ಜಿನಕೊಪ್ಪ, ಸರ್ಕಲ್ ಇನ್ಸ್‌ಪೆಕ್ಟರ್ ಉದಯರವಿ, ಸಬ್ ಇನ್ಸ್‌ಪೆಕ್ಟರ್ ತಾರಾಬಾಯಿ ರಾಠೋಡ ಅವರು ಭಾಗವಹಿಸಿದ್ದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಜಿಲ್ಲಾ ಎಸ್ಪಿ ಮದುವೆಯಲ್ಲಿ ಪಾಲ್ಗೊಂಡ ಮೂವರು ಹಿರಿಯ ಅಧಿಕಾರಿಗಳನ್ನು ಸುದೀರ್ಘ ಕಡ್ಡಾಯ ರಜೆ ಮೇಲೆ ಎಸ್ಪಿ ಕಳುಹಿಸಿದ್ದಾರೆ.