(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 05: ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಜೈಲುಪಾಲಾಗಿರುವ ನಟಿ ಸಂಜನಾ ಗಲ್ರಾನಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಡಿಸೆಂಬರ್ 7ಕ್ಕೆ ಕಾಯ್ದಿರಿಸಿದೆ.
ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಪೀಠ ಸಂಜನಾ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿತು. ಆರೋಪಿ ನಟಿ ಪರ ಹಿರಿಯ ವಕೀಲ ಹಸ್ಮತ್ ಪಾಷಾ ವಾದ ಮಂಡಿಸಿ, ಸಂಜನಾಗೆ ಅನಾರೋಗ್ಯ ಸಮಸ್ಯೆ ಇದೆ. ಅವರು ಇದಕ್ಕಾಗಿ 2018ರಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಸರ್ಜರಿಗೆ ಒಳಗಾಗಿದ್ದರು. 2019ರಿಂದ ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆ ಎದುರಿಸುತ್ತಿರುವುದರಿಂದ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಬಹುದು. ಹಾಗಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದರಿಂದ ಜಾಮೀನು ನೀಡಬೇಕು ಎಂದು ಮನವಿ ಮಾಡಿದರು.
ಇನ್ನು ಸರ್ಕಾರದ ಪರ ವಾದ ಮಂಡಿಸಿದ ಎಸ್ಪಿಪಿ ವೀರಣ್ಣ ತಿಗಡಿ ಅವರು, ಆರೋಪಿಗೆ ಈಗಾಗಲೇ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ಜಾಮೀನು ತಿರಸ್ಕರಿಸಿವೆ. ಆಗಲು ಅವರು ಅನಾರೋಗ್ಯದ ನೆಪ ಒಡ್ಡಿದ್ದರು. ಅವರಿಗೆ ಜೈಲಿನಲ್ಲೇ ಸೂಕ್ತ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಬಹುದು. ಆದರೆ ಅದಕ್ಕಾಗಿ ಜಾಮೀನು ನೀಡಬಾರದು. ಒಂದು ವೇಳೆ ಜಾಮೀನು ನೀಡಿದರೆ ಆರೋಪಿ ತನಿಖೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದರು. ಎರಡು ಕಡೆ ವಾದ ಆಲಿಸಿದ ಕೋರ್ಟ್ ಆರೋಪಿಯ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ ಡಿಸೆಂಬರ್ 7ರಂದು ತೀರ್ಪು ನೀಡುವುದಾಗಿ ತಿಳಿಸಿದೆ.