(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಆಳ ಸಮುದ್ರದಲ್ಲಿ ಮುಳುಗಿ ಆರು ಮಂದಿ ನಾಪತ್ತೆಯಾಗಿರುವ ಘಟನೆಯಲ್ಲಿ ಇನ್ನೂ ನಾಲ್ವರ ಮೃತದೇಹ ಪತ್ತೆಯಾಗದಿರುವ ಹಿನ್ನೆಲೆಯಲ್ಲಿ, ಮೀನುಗಾರಿಕೆ ನಿಲ್ಲಿಸುವಂತೆ ಬೆಂಗರೆ ನಾಗರಿಕರು ಮಧ್ಯರಾತ್ರಿ ಶಾಂತಿಯುತ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮೀನುಗಾರಿಕೆಗೆ ತೆರಳಿದ್ದ ಉಳ್ಳಾಲ ಮೂಲದ ಶ್ರೀ ರಕ್ಷಾ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿ 16 ಮಂದಿ ಪಾರಾಗಿ, ಆರು ಮಂದಿ ನಾಪತ್ತೆಯಾಗಿದ್ದರು. ಅವರಲ್ಲಿ ಇಬ್ಬರ ಮೃತ ದೇಹ ಮಾತ್ರ ಪತ್ತೆಯಾಗಿತ್ತು.ಮೀನುಗಾರಿಕೆಗೆ ತೆರಳಿ ಇಂತಹ ಅನಾಹುತ ಸಂಭವಿಸಿದ ಸಂದರ್ಭಗಳಲ್ಲಿ ಕರಾವಳಿ ರಕ್ಷಣಾ ಪಡೆ ಸರಿಯಾದ ರೀತಿಯಲ್ಲಿ ಶೋಧನೆ ನಡೆಸದೆ, ಸ್ಥಳಿಯವಾಗಿ ಇತರ ಮೀನುಗಾರರು, ಮುಳುಗು ತಜ್ಞರು ಮಾಡಿದ ಕೆಲಸವನ್ನು ನಾವೇ ಮಾಡಿದ್ದು ಎಂದು ಹೇಳಿಕೊಂಡು ಪೋಸ್ ಕೊಡುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಮ್ಮ ಜೀವದ ಹಂಗು ತೊರೆದು ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ ಮೀನು ಹಿಡಿದು ದಡ ಸೇರುತ್ತಾರೆ. ಇಲ್ಲಿ ಮೀನುಗಾರನಿಗೆ ಯಾವುದೇ ಸೌಲಭ್ಯ ಒದಗಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಆದುದರಿಂದ ಇಂತಹ ದುರಂತಗಳು ಸಂಭವಿಸಿದ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಹಾಗೂ ಮೀನುಗಾರಿಕೆ ಸಂಘದ ವತಿತಿಂದ ಯಾವುದೇ ಸಹಕಾರ ದೊರೆಯುವುದಿಲ್ಲ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ ಎಂದು ಸ್ಥಳೀಯ ನಗರ ಪಾಲಿಕೆ ಸದಸ್ಯ ಮುನೀಬ್ ಬೆಂಗರೆ ಹೇಳಿದ್ದಾರೆ. ಕಾಂಗ್ರೆಸ್ ಮುಖಂಡ ಬಿಲಾಲ್ ಮೊಯ್ಯುದ್ದೀನ್ ಹಾಗೂ ಸ್ಥಳೀಯ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.