(ನ್ಯೂಸ್ ಕಡಬ) newskadaba.com ಮಣಿಪಾಲ, ಅ.04. ಬಡಗುತಿಟ್ಟು ಯಕ್ಷಗಾನದ ಮೇರು ಕಲಾವಿದ ಹಾಗೂ ವಿವಿಧ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದ ಹಿರಿಯ ಯಕ್ಷಗಾನ ಕಲಾವಿದ, ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆ (84) ಅವರು ಮಂಗಳವಾರ ರಾತ್ರಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.
ಚಿಟ್ಟಾಣಿಯವರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ತೀವ್ರ ಜ್ವರದ ಕಾರಣ ಕಳೆದ ಶುಕ್ರವಾರ ರಾತ್ರಿ ಕೆಎಂಸಿಗೆ ದಾಖಲಾಗಿದ್ದ ಚಿಟ್ಟಾಣಿಯವರು ನ್ಯುಮೋನಿಯಾ ಸಂಬಂಧಿ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಚಿಟ್ಟಾಣಿಯವರ ಅಪೇಕ್ಷೆಯಂತೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಹೇರಂಗಡಿಯಲ್ಲಿ ಇಂದು ಸಂಜೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.