(ನ್ಯೂಸ್ ಕಡಬ) newskadaba.com ಅಂಬಾಲಾ , ಜು.29: ತೀವ್ರ ನಿರೀಕ್ಷೆ ಹುಟ್ಟಿಸಿರುವ ಫ್ರಾನ್ಸ್ ನಿರ್ಮಿತ ರಾಫೆಲ್ ಯುದ್ಧ ವಿಮಾನ ಹರ್ಯಾಣ ಅಂಬಾಲಾ ವಾಯುನೆಲೆಗೆ ಆಗಮಿಸಿದ್ದು, ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ (ಆರ್‌ಕೆಎಸ್ ಭದೌರಿಯಾ) ಬರಮಾಡಿಕೊಂಡಿದ್ದಾರೆ. ಫ್ರಾನ್ಸ್‌ನಿಂದ ಹೊರಟಿದ್ದ ಮೊದಲ ಹಂತದ ಐದು ರಾಫೆಲ್ ಯುದ್ಧ ವಿಮಾನಗಳು ಇಂದು ಮಧ್ಯಾಹ್ನ ಅಂಬಾಲ ವಾಯುನೆಲೆಗೆ ಬಂದಿಳಿದಿವೆ.
ಫ್ರಾನ್ಸ್ ಮೂಲದ ಡಸಾಲ್ಟ್ ಕಂಪೆನಿ ನಿರ್ಮಿತ 5 ರಾಫೆಲ್ ಫೈಟರ್ ಜೆಟ್ ವಿಮಾನಗಳು ಇದಾಗಿದ್ದು, ಈ ಐದು ಯುದ್ಧ ವಿಮಾನಗಳ ಪೈಕಿ ಎರಡು ವಿಮಾನಗಳು 2 ಸೀಟರ್ ತರಬೇತಿ ವಿಮಾನಗಳಾಗಿದ್ದು, 3 ಸಿಂಗಲ್ ಸೀಟರ್ ಫೈಟರ್ ಜೆಟ್ ಗಳಾಗಿವೆ. ಫ್ರೆಂಚ್ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಶನ್ ಕಾರ್ಖಾನೆ ನಿರ್ಮಿಸಿದ ರಫೆಲ್ ಫೈಟರ್ ಜೆಟ್‌ಗಳು ದಕ್ಷಿಣ ಫ್ರಾನ್ಸ್‌ನ ಬೋರ್ಡಾಕ್ಸ್ ನಗರದ ಮೆರಿಗ್ನಾಕ್ ವಾಯು ನೆಲೆಯಿಂದ ಜುಲೈ 27ರಂದು ಭಾರತದತ್ತ ಮುಖ ಮಾಡಿದ್ದವು. ಇಂದು ಬೆಳಗ್ಗೆ 11.44ರ ಹೊತ್ತಿನಲ್ಲಿ ಮತ್ತೆ ಟೇಕ್ ಆಫ್ ಯುದ್ಧ ವಿಮಾನಗಳು ಭಾರತದತ್ತ ಮುಖ ಮಾಡಿದ್ದವು. ಇದೀಗ ಹರ್ಯಾಣ ಅಂಬಾಲಾ ಏರ್ ಬೇಸ್ ಗೆ ಬಂದಿಳಿದಿವೆ. ಅಂಬಾಲಾ ವಾಯುನೆಲೆಯಲ್ಲಿ ಬಂದಿಳಿದ ರಾಫೆಲ್ ಯುದ್ಧ ವಿಮಾನಗಳನ್ನು ಭಾರತೀಯ ಸೇನೆ ವಾಟರ್ ಸೆಲ್ಯೂಟ್ ಮಾಡುವ ಮೂಲಕ ಸ್ವಾಗತ ಕೋರಿತು. ವಾಯುನೆಲೆಯಲ್ಲಿದ್ದ ಎರಡು ವಾಟರ್ ಜೆಟ್ ವಾಹನಗಳು ವಿಮಾನಗಳ ಮೇಲೆ ನೀರನ್ನು ಸುರಿಯುವ ಮೂಲಕ ವಿದ್ಯುಕ್ತವಾಗಿ ವಿಮಾನಗಳನ್ನು ಬರ ಮಾಡಿಕೊಂಡವು.