(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ. 30, ಲಾಕ್ ಡೌನ್ ಕಾರಣದಿಂದಾಗಿ ಮುಂದೂಡಲ್ಪಟ್ಟಿದ್ದ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆಯನ್ನು ಜೂನ್ 18ಕ್ಕೆ ನಡೆಸಿ, ಜುಲೈ 8ರ ಅಂದಾಜಿಗೆ ದ್ವಿತೀಯ ಪಿಯು ಫಲಿತಾಂಶ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಜುಲೈ ತಿಂಗಳ ಅಂತ್ಯದ ವೇಳೆಗೆ ಪ್ರಕಟಿಸುವುದಾಗಿಯೂ ತಿಳಿಸಿದ್ದಾರೆ.
ನಗರದಲ್ಲಿ ಡಿಡಿಪಿಐಗಳ ಸಭೆ ನಡೆಸಿದ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬಾರದು ಎಂದು ಕೆಲವರು ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದ್ದು, ಜೂನ್ 25ರಿಂದ ಜುಲೈ 4ರವರೆಗೆ ಪರೀಕ್ಷೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 24 ರಿಂದ 18ಕ್ಕೆ ಇಳಿಸಲಾಗಿದೆ ಎಂದವರು ಇದೇ ವೇಳೆ ತಿಳಿಸಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆಯ ಆದೇಶಗಳನ್ನು ಉಲ್ಲಂಘಿಸಿ ಶುಲ್ಕ ಹೆಚ್ಚಿಸುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಇದೇ ವೇಳೆ ಗ್ರಾಮೀಣ ಭಾಗದ ಮಕ್ಕಳು ಆನ್’ಲೈನ್ ತರಗತಿಯಲ್ಲಿ ಭಾಗವಹಿಸಲು ಸಾಧ್ಯವೇ ಎಂಬುದರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.