(ನ್ಯೂಸ್ ಕಡಬ) newskadaba.com ಮಂಗಳೂರು, ಅ.11. ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಸ್ಯಾಕ್ಸೊಫೋನ್ ವಾದಕರಾಗಿದ್ದ ಕದ್ರಿ ಗೋಪಾಲನಾಥ್, ಸ್ಯಾಕ್ಸೊಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದಿದ್ದರು. ನಾಗಸ್ವರ ವಿದ್ವಾಂಸರಾಗಿದ್ದ ತನಿಯಪ್ಪ ಹಾಗೂ ಗಂಗಮ್ಮ ದಂಪತಿಗಳ ಪುತ್ರನಾಗಿ 1950ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಜೀಪ ಮೂಡ ಗ್ರಾಮದ ಮಿತ್ತಕೆರೆ ಎಂಬಲ್ಲಿ ಜನಿಸಿದ ಗೋಪಾಲನಾಥರು ಬಾಲ್ಯದಿಂದಲೇ ತಂದೆಯವರಿಂದ ನಾಗಸ್ವರ ಶಿಕ್ಷಣವನ್ನು ಪಡೆದರು. ಒಮ್ಮೆ ಅವರು ಮೈಸೂರು ಅರಮನೆಯ ಬ್ಯಾಂಡ್ ಸೆಟ್ ನೊಂದಿಗೆ ಸ್ಯಾಕ್ಸಫೋನ್ ವಾದನವನ್ನು ಕೇಳಿ ಆ ವಾದ್ಯದಲ್ಲಿರುವ ವೈವಿಧ್ಯತೆಗೆ ಮನಸೋತು ಸ್ಯಾಕ್ಸಫೋನಿನಲ್ಲಿಯೇ ಪ್ರಾವೀಣ್ಯತೆ ಸಂಪಾದಿಸಬೇಕೆಂಬ ದೃಢ ನಿರ್ಧಾರ ಕೈಗೊಂಡು ಕಲಾನಿಕೇತನದ ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಸ್ಯಾಕ್ಸಫೋನ್ ವಾದ್ಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನುಡಿಸುವುದನ್ನು ಕಲಿತರು. ಅತ್ಯಂತ ಶ್ರದ್ಧೆಯಿಂದ ಸಂಗೀತವನ್ನು ಅಭ್ಯಾಸ ಮಾಡಿದ ಗೋಪಾಲನಾಥರು ಕರ್ನಾಟಕ ಸಂಗೀತ ಮತ್ತು ಸ್ಯಾಕ್ಸೊಫೋನ್ ವಾದ್ಯಗಳೆರಡರಲ್ಲೂ ಪ್ರಭುತ್ವ ಸಾಧಿಸಿದರು.
ಕದ್ರಿಯವರು ಪತ್ನಿ ಮತ್ತು ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮಂಗಳೂರು ಪದವಿನಂಗಡಿ ಮನೆಯಲ್ಲಿ ಇಂದು ಅಂತ್ಯ ಸಂಸ್ಕಾರ ನಡೆಯಲಿದೆ.