(ನ್ಯೂಸ್ ಕಡಬ) newskadaba.com.ಕಡಬ,ಜ.11.ಮಂಗನ ಖಾಯಿಲೆ ಮೊದಲ ಬಾರಿಗೆ 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಕ್ಯಾಸನೂರ್ ಎಂಬ ಹಳ್ಳಿಯ ಕಾನನದಲ್ಲಿ ಕಾಣಿಸಿಕೊಂಡಿತ್ತು. ಈ ಕಾರಣದಿಂದಲೇ ಈ ರೋಗವನ್ನು ಕ್ಯಾಸನೂರ್ ಪಾರೇಸ್ಟ್ ಡಿಸೀಸ್ (ಏಈಆ) ಎಂದೂ ಕರೆಯುತ್ತಾರೆ. ಸಾವಿರಾರು ಮಂಗಗಳು ಈ ರೋಗದಿಂದ ಸಾವಿಗಿಡಾಗಿದ್ದ ಕಾರಣದಿಂದಲೇ, ಈ ರೋಗ ಮಂಗಜ್ವರ, ಮಂಗನ ಖಾಯಿಲೆ ಎಂದೂ ಕುಖ್ಯಾತಿ ಪಡೆದಿದೆ. ಉಣ್ಣೆಗಳ ಮುಖಾಂತರ ಹರಡುವ ಈ ರೋಗ, ಉಣ್ಣೆ ಕಡಿತದ ಕೆಲವೇ ಗಂಟೆಗಳಲ್ಲಿ ಈ ವೈರಾಣು ರಕ್ತ ಸೇರುತ್ತದೆ. ಪ್ಲಾವಿವೈರಸ್ ಎಂಬ ಗುಂಪಿಗೆ ಸೇರಿದ ವೈರಾಣು ಇದಾಗಿದ್ದು ಡೆಂಘಿ ಜ್ವರ ಮತ್ತು ಹಳದಿ ಜ್ವರವನ್ನೂ ಇದೇ ವಂಶದ ವೈರಾಣುಗಳು ಹರಡುತ್ತವೆ. ಮಂಗನ ಖಾಯಿಲೆಗೆ ಕಾರಣವಾದ ವೈರಸನ್ನು ಏಈಆ ವೈರಸ್ ಎಂದು ಕರೆಯಲಾಗುತ್ತದೆ. ಮುಳ್ಳುಹಂದಿ, ಇಲಿಗಳು, ಅಳಿಲುಗಳು, ಮಂಗಗಳು ಮುಂತಾದ ಪ್ರಾಣಿಗಳಲ್ಲಿ ಈ ವೈರಾಣುಗಳು ಬದುಕುತ್ತದೆ. ಹೆಮಾಫೈಲಿಸ್ ಸ್ಪಿಂಜೆರಾ ಎಂಬ ಕಾಡಿನ ಉಣ್ಣೆ ವೈರಾಣುವನ್ನು ಕಡಿತದ ಮುಖಾಂತರ ಮನುಷ್ಯನಿಗೆ ಸಸ್ತನಿಗಳಿಂದ ಹರಡುತ್ತದೆ. ರೋಗ ಬಂದವರಲ್ಲಿ 3 ರಿಂದ 10 ಶೇಕಡಾ ಮಂದಿ ಸಾವನ್ನಪ್ಪುತ್ತಾರೆ. 1982ರಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಈ ಮಂಗನ ಖಾಯಿಲೆ ತನ್ನ ಮರಣ ಮೃದಂಗವನ್ನೂ ಬಾರಿಸಿ ಕನಿಷ್ಠ 500 ಮಂದಿಯನ್ನು ಬಲಿ ತೆಗೆದುಕೊಂಡಿತ್ತು.
ರೋಗದ ಲಕ್ಷಣಗಳು ಏನು? :-
ವೈರಾಣು ದೇಹವನ್ನು ಸೇರಿದ ಬಳಿಕ 3 ರಿಂದ 8 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ವೈರಾಣು ವ್ಯಕ್ತಿಯ ದೇಹವನ್ನು ಸೇರಿದ ಬಳಿಕ ರಕ್ತದ ಮುಖಾಂತರ ಮೆದುಳಿಗೆ ರವಾನೆಯಾಗುತ್ತದೆ. ಮೆದುಳಿನ ಜೀವಕೋಶಗಳಲ್ಲಿ ತನ್ನ ವಂಶಾಭಿವೃದ್ಧಿ ಮಾಡಿಕೊಂಡು, ಮೆದುಳಿನ ಜೀವಕೋಳಗಳನ್ನು ಹಾಳುಗೆಡವಿ ತನ್ನ ರುಧ್ರನರ್ತನವನ್ನು ಆರಂಭಿಸುತ್ತದೆ. ತೀವ್ರವಾದ ತಲೆನೋವು (ತಲೆಯ ಮುಂಭಾಗದಲ್ಲಿ), ವಿಪರೀತ ಜ್ವರ, ನಡುಕ, ಚಳಿ, ಮೈಕೈ ನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ, ಲಕ್ವ ಹೊಡೆದಂತಾಗುವುದು, ಕೈಕಾಲು ಜಗ್ಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮುಂದುವರಿದ ಹಂತದಲ್ಲಿ ಮೂಗಿನಿಂದ ರಕ್ತ ಸೋರುವಿಕೆ, ವಸಡಿನಲ್ಲಿ ರಕ್ತ, ರಕ್ತ ವಾಂತಿ, ಮೆದುಳಿನೊಳಗೆ ರಕ್ತಸ್ರಾವ ಉಂಟಾಗುತ್ತದೆ. ರಕ್ತದಲ್ಲಿ ಪೆಟ್‍ಲೇಟ್ ಅಥವಾ ರಕ್ತ ತಟ್ಟೆ ಎಂಬ ರಕ್ತಕಣಗಳ ಸಂಖ್ಯೆ ಕಡಮೆಯಾಗುವುದೇ ಇದಕ್ಕೆ ಮೂಲ ಕಾರಣ. ಹೆಚ್ಚಿನ ಸಂದರ್ಭಗಳಲ್ಲಿ ರಕ್ತತಟ್ಟೆಗಳ ಸಂಖ್ಯೆ ಬಹಳಷ್ಟು ಕಡಮೆಯಾಗಿ ಮೆದುಳಿನೊಳಗೆ ತೀವ್ರ ರಕ್ತಸ್ರಾವವಾಗಿ ಸಾವಿಗೆ ಕಾರಣವಾಗುತ್ತದೆ. ಅನಾಸಕ್ತಿ, ನಿಶ್ಯಕ್ತಿ, ನಿದ್ರಾಹೀನತೆ, ಮೈ ಮೇಲೆಲ್ಲಾ ಕೆಂಪು ಚಿಕ್ಕ ಚಿಕ್ಕ ಗುಳ್ಳೆಗಳು (ರಕ್ತ ತಟ್ಟೆಗಳ ಸಂಖ್ಯೆ ಕಡಮೆಯಾಗಿರುವುದರಿಂದ ಚರ್ಮದಡಿಯಲ್ಲಿ ಚಿಕ್ಕ ಚಿಕ್ಕ ರಕ್ತನಾಳಗಳು ಒಡೆದುಕೊಂಡು ರಕ್ತ ಒಸರುವುದು) ಕಫದೊಂದಿಗೆ ರಕ್ತ, ಮಲದೊಂದಿಗೆ ರಕ್ತ, ತಲೆ ಸುತ್ತುವುದು, ಮೂರ್ಚೆ ತಪ್ಪುವುದು ಮತ್ತು ಕೊನೆ ಹಂತದಲ್ಲಿ ಮರಣ ಕೂಡಾ ಸಂಭವಿಸಬಹುದು. ಸಕಾಲದಲ್ಲಿ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ 2 ವಾರಗಳಲ್ಲಿ ಗುಣವಾಗಬಹುದು. ಆದರೆ ಸಂಪೂರ್ಣವಾಗಿ ಮೊದಲಿನಂತಾಗಲು ಕನಿಷ್ಠ 8-10 ತಿಂಗಳು ಹಿಡಿಯಬಹುದು. ಸ್ನಾಯಗಳ ಸೆಳೆತ, ಸುಸ್ತು, ನಿಶ್ಯಕ್ತಿ, ನಿರಾಸಕ್ತಿ ಹಲವರು ತಿಂಗಳುಗಳ ಕಾಲ ಕಾಡಬಹುದು. ಮಂಗನ ಖಾಯಿಲೆ ಬಂದಾಗ ರೋಗಿ ಮಂಗನಂತೆ ಕಿರಿಚುತ್ತಾನೆ, ಮಂಗನಂತೆ ವರ್ತಿಸುತ್ತಾನೆ ಎಂಬುವುದು ನಿಜವಲ್ಲ. ರೋಗಿಯಿಂದ ಇನ್ನೊಬ್ಬರಿಗೆ ಗಾಳಿಯ ಮುಖಾಂತರ ರೋಗ ಹರಡದು. ಉಣ್ಣೆ ಕಡಿತದ ಮುಖಾಂತರ ವೈರಾಣುವಿನಿಂದ ಮಾತ್ರ ಹರಡುತ್ತದೆ. ರೋಗಕ್ಕೆ ಚಿಕಿತ್ಸೆ ಇಲ್ಲದಿದ್ದರೂ, ಸಕಾಲದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡದಲ್ಲಿ ಪ್ರಾಣಾಪಾಯದಿಂದ ಪಾರಾಗಬಹುದು. ಗ್ರಾಮೀಣ ಪ್ರದೇಶಗಳಲ್ಲಿ ದೇವರು ಮುನಿದು ಈ ರೋಗ ಬಂದಿದೆ ಎಂದೂ, ಮುನಿದ ಮಾರಿಯ ಶಾಪ ಎಂದು ಕಟ್ಟುಕತೆ ಪ್ರಚಲಿತವಾಗಿತ್ತು. ಇದೂ ಕೂಡಾ ಸತ್ಯಕ್ಕೆ ದೂರವಾದ ಮಾತು.
ಚಿಕಿತ್ಸೆ ಹೇಗೆ? :-
ಮೇಲೆ ಕಾಣಿಸಿದ ಲಕ್ಷಣಗಳು ಕಾಣಿಸಿಕೊಂಡಲ್ಲಿ Pಅಖ ಪರೀಕ್ಷೆಯ ಮುಖಾಂತರ ಮತ್ತು ಇಐISಂ ಪರೀಕ್ಷೆಯ ಮುಖಾಂತರ ‘ಇಮ್ಯನೋ ಗ್ಲೋಬುಲಿನ್ ಒ’ ಎಂಬ ಆಂಟಿಬಾಡಿಗಳನ್ನು (ಏಈಆ ವೈರಾಣುವಿನ ವಿರುದ್ಧವಾದ) ರಕ್ತದಲ್ಲಿ ಪತ್ತೆ ಹಚ್ಚಿ ರೋಗವನ್ನು ದೃಡೀಕರಿಸುತ್ತಾರೆ. ರೋಗದ ತೀವ್ರತೆಯನ್ನು ಮತ್ತು ಚಿಹ್ನೆಗಳನ್ನು ಅನುಸರಿಸಿ ರೋಗಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ರೋಗಿಯನ್ನು ಒಳರೋಗಿಯಾಗಿ ಆಸ್ಪತ್ರೆಯಲ್ಲಿ ದಾಖಲಿಸಿ, ತೀವ್ರ ತರವಾದ ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತದೆ. ಎಲ್ಲಾ ವೈರಸ್ ಜ್ವರದಂತೆ ಪಾರಾಸಿಟಮೋಲ್ ಮಾತ್ರೆ, ಸಾಕಷ್ಟು ದ್ರವಾಹಾರ, ಸಂಪೂರ್ಣ ವಿಶ್ರಾಂತಿ ನೀಡಿ, ರಕ್ತನಾಳಗಳ ಮುಖಾಂತರ ಪ್ರೋಟಿನ್ ಪೋಷಕಾಂಶಯುಕ್ತ ದ್ರಾವಣ ನೀಡಿ ಉಪಚರಿಸಲಾಗುತ್ತದೆ. ರಕ್ತಸ್ರಾವವಾದಲ್ಲಿ ರಕ್ತ ಮರುಪೂರಣ ಮಾಡಿ ರಕ್ತ ಹೀನತೆ ಮತ್ತು ರಕ್ತದ ಒತ್ತಡ ಕಡಮೆಯಾದಂತೆ ನಿಗಾ ವಹಿಸಲಾಗುತ್ತದೆ. ರಕ್ತ ತಟ್ಟೆಗಳ ಸಂಖ್ಯೆ ಕಡಮೆಯಾದಲ್ಲಿ ರಕ್ತ ತಟ್ಟೆಗಳ ಮರುಪೂರಣದ ಅಗತ್ಯವು ಇರುತ್ತದೆ. ಸಂಪೂರ್ಣವಾಗಿ ಗುಣಮುಖವಾದ ಬಳಿಕವೇ ಮನೆಗೆ ಕಳುಹಿಸಲಾಗುತ್ತದೆ.
ತಡೆಗಟ್ಟುವುದು ಹೇಗೆ? :-
ಮಂಗನ ಖಾಯಿಲೆ ವಿರುದ್ಧ ಲಸಿಕೆ ಹಾಕಿ ರೋಗವನ್ನು ಬರದಂತೆ ತಡೆಯಲಾಗುತ್ತದೆ. ಪಾರ್ಮಾಲಿಸ್‍ನಿಂದ ವಿಷಕಾರಕತ್ವವನ್ನು ತೆಗೆದ ಏಈಆಗಿ ಎಂಬ ವೈರಾಣು ನಿರ್ಜೀವಿ ಲಸಿಕೆಯನ್ನು ನೀಡಲಾಗಿ ರೋಗ ಬರದಂತೆ ಮಾಡುತ್ತಾರೆ. ಎರಡು ಲಸಿಕೆ ತೆಗೆದುಕೊಂಡವರಿಗೆ 62% ಮತ್ತು ಮೂರು ಲಸಿಕೆ ತೆಗೆದುಕೊಂಡಲ್ಲಿ 82% ಜನರಿಗೆ ರೋಗ ನಿರೋಧಕತ್ವ ಬರುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. 2016ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 31,500 ಜನರಿಗೆ ಮೂರು ಬಾರಿ ಲಸಿಕೆ ಹಾಕಿ (ಡಿಸೆಂಬರ್ 2015, ಜನವರಿ, 2016 ಮತ್ತು ಜೂನು 2016) ಮಂಗನ ಖಾಯಿಲೆ ಬರದಂತೆ ಮುಂಜಾಗರೂಕತೆ ವಹಿಸಲಾಗಿದೆ. ಇದಲ್ಲದೆ ಕಾಡಿನ ಸುತ್ತ ವಾಸಿಸುವವರು ಸಂಪೂರ್ಣ ಮೈ ಮೆಟ್ಟುವ ವಸ್ತ್ರ ಧರಿಸಿ ಕಾಡಿಗೆ ಹೋಗತಕ್ಕದ್ದು. ಕಾಡಿಗೆ ಹೋದಾಗ ಉಣ್ಣೆ ಕಡಿತವಾಗದಂತೆ ಎಚ್ಚರ ವಹಿಸಬೇಕು. ಮಂಗ ಸತ್ತ ಪ್ರದೇಶದಲ್ಲಿ ಲಿಂಡೆವ್ ಮಿಶ್ರಣ ಸಿಂಪಡಿಸಲಾಗುತ್ತದೆ. ತಲೆನೋವು ಜ್ವರ ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ಮನೆಯಲ್ಲಿ ಯಾರಿಗಾದರೂ ಜ್ವರ ಬಂದಿದ್ದಲ್ಲಿ ಎಲ್ಲರೂ ರಕ್ತ ಪರೀಕ್ಷೆ ಮಾಡಿಸಿ ಸಾಕಷ್ಟು ಮುಂಜಾಗರೂಕತೆ ವಹಿಸತಕ್ಕದ್ದು. ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ನೀಡಿದಲ್ಲಿ ಶೀಘ್ರ ಗುಣ ಮುಖವಾಗಬಹುದು.ಏಷ್ಯಾಖಂಡದಲ್ಲಿ ಮಾತ್ರ ಕಾಣಿಸಿಕೊಳ್ಳುವ ಈ ಮಂಗನ ಖಾಯಿಲೆ, ಏಈಆಗಿ ಎಂಬ ವೈರಾಣುವಿನಿಂದ ಉಣ್ಣೆಯ ಮುಖಾಂತರ ಹರಡುವ ರೋಗ, ಇತ್ತೀಚಿಗೆ ಗೋವಾ ರಾಜ್ಯದ ಪಾಲಿ ಎಂಬ ಹಳ್ಳಿಯಲ್ಲಿ ಸುದ್ದಿ ಮಾಡಿದೆ. ಕೇರಳದ ವಯನಾಡಿನ ಕಾಡಿನ ಸುತ್ತಮುತ್ತ ಮತ್ತು ಮಲ್ಲಪ್ಪುರಮ್‍ನಲ್ಲೂ, ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ, ಕರ್ನಾಟಕದ ಚಾಮರಾಜ ನಗರದ ಬಂಡಿಪುರ ಸಂರಕ್ಷಿತ ಅರಣ್ಯದ ಸುತ್ತ ಮುತ್ತಲೂ ಕಾಣಿಸಿಕೊಂಡಿತ್ತು. ಕಳೆದ 60 ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕ್ಯಾಸನೂರು ಎಂಬ ಹಳ್ಳಿಯಲ್ಲಿ ಸುಮಾರು 531 ಮಂದಿಯನ್ನು ಈ ಮಂಗನ ಖಾಯಿಲೆ ಬಲಿ ತೆಗೆದುಕೊಂಡಿದೆ. ಕೇವಲ ಉಣ್ಣೆಗಳ ಮುಖಾಂತರ ಮತ್ತು ವೈರಾಣು ಸೋಂಕು ತಗುಲಿದ ಮಂಗಗಳ ಸ್ಪರ್ಶದಿಂದ ಮಾತ್ರ ಈ ರೋಗ ಹರಡುತ್ತದೆ. ರೋಗ ಪೀಡಿತ ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಹರಡುವ ಸಾಧ್ಯತೆ ಬಹಳ ಕಡಮೆ. ನವಂಬರ್ ಮತ್ತು ಮಾರ್ಚ್ ತಿಂಗಳ ನಡುವೆ ಹೆಚ್ಚಾಗಿ ಕಾಣಿಸುವ ಈ ರೋಗ, ಕಾಡಿಗೆ ಹೆಚ್ಚಾಗಿ ಹೋಗುವ ಫಾರೆಸ್ಟು ಗಾರ್ಡುಗಳಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಕಾಡಿಗೆ ಹೋಗುವ ದನಗಳಿಗೆ ಈ ವೈರಾಣು ಸೋಂಕು ತಗಲುವ ಸಾಧ್ಯತೆ ಇದ್ದರೂ, ಮನುಷ್ಯನಿಗೆ ಹರಡುವ ಸಾಧ್ಯತೆ ಕಡಮೆ. ಆರಂಭಿಕ ಹಂತದಲ್ಲಿಯೇ ಗುರುತಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣ ಗುಣ ಮುಖವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಲಸಿಕೆಯಿಂದ ತಡೆಗಟ್ಟಬಹುದಾದ ರೋಗ ಇದಾಗಿರುವುದರಿಂದ ಲಸಿಕೆ ಹಾಕಿಸುವುದರಲ್ಲಿಯೇ ಜಾಣತನ ಅಡಗಿದೆ.
ಡಾ|| ಮುರಲೀ ಮೋಹನ್ ಚೂಂತಾರು
ದಂತವೈದ್ಯರು
ಸುರಕ್ಷ ದಂತ ಚಿಕಿತ್ಸಾಲಯ ಹೊಸಂಗಡಿ