ಕಡಬ ಠಾಣಾ ಪೊಲೀಸರಿಗೆ ಹಲ್ಲೆ ಪ್ರಕರಣ ► ಆರೋಪಿಗಳಿಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಕಡಬ, ಅ.02. ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವುದನ್ನು ತಪಾಸಣೆ ನಡೆಸುತ್ತಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೊಲೀಸ್ ವಾಹನಕ್ಕೆ ಹಾನಿಗೈದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಆರೋಪಿಗಳನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

ಭಾನುವಾರ ರಾತ್ರಿ ಕಡಬ ಎಸ್‍ಐ ಪ್ರಕಾಶ್ ದೇವಾಡಿಗ ಹಾಗೂ ಸಿಬ್ಬಂದಿಗಳಾದ ಶಿವಪ್ರಸಾದ್, ಪುಟ್ಟಸ್ವಾಮಪ್ಪ, ಶ್ರೀಶೈಲ ಹಾಗೂ ಗಹರಕ್ಷಕ ದಳದ ಸಿಬಂದಿ ಯೋಗೀಶ್ ಅವರು ಮರ್ದಾಳ ಸಮೀಪದ ಚಾಕೊಟೆಕೆರೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಇಚ್ಲಂಪಾಡಿ ಗ್ರಾಮದ ಮುಚ್ಚಿಲ ಮನೆ ನಿವಾಸಿಗಳಾದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಯೋಧರಾದ ರತ್ನಾಕರ (36) ಮತ್ತು ಹರಿಶ್ಚಂದ್ರ (37), ಪ್ರಶಾಂತ್ (31) ಹಾಗೂ ಬರೆಮೇಲು ನಿವಾಸಿ ದಿನೇಶ್ (30) ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೊಲೀಸ್ ವಾಹನಕ್ಕೆ ಹಾನಿಗೈದಿದ್ದರು. ಪ್ರಕರಣದಲ್ಲಿ ಭಾಗಿಯಾದ ಇನ್ನೂ ಕೆಲವು ಆರೋಪಿಗಳು ತಲೆಮರೆಸಿಕೊಂಡಿದ್ದು, ಹಲ್ಲೆ ಸಂದರ್ಭದಲ್ಲಿ ಮಾಡಲಾದ ವಿಡಿಯೋದ ಆಧಾರದಲ್ಲಿ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಪುತ್ತೂರು ಡಿವೈಎಸ್ಪಿ ಶ್ರೀನಿವಾಸ್ ಹಾಗೂ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ ನಾಯ್ಕ ಅವರು ಸೋಮವಾರ ಕಡಬ ಠಾಣೆಗೆ ಭೇಟಿ ನೀಡಿ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಪಡೆದಿದ್ದಾರೆ.

ಸರ್ಕಾರಿ ಇಲಾಖಾ ಕರ್ತವ್ಯವನ್ನು ನಿರ್ವಹಿಸುವಾಗ ಕರ್ತವ್ಶಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಲಂ 143ˌ 147ˌ 148ˌ 353ˌ 332ˌ 333ˌ 307ˌ ಜೊತೆಗೆ 149 ಐಪಿಸಿ ಮತ್ತು ಕಲಂ 2 ಕೆಪಿಡಿಎಲ್ಪಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group