ಬೆಳಂದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದು ► ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಗ್ರಹ

ಕಡಬ: ಬೆಳಂದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ನೀಡಬಾರದೆಂಬ ಆಗ್ರಹ ಬೆಳಂದೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆಯಲ್ಲಿ ವ್ಯಕ್ತವಾಯಿತು. ಕುದ್ಮಾರು, ಕಾೈಮಣ, ಬೆಳಂದೂರು ಗ್ರಾಮಗಳನ್ನೊಳಗೊಂಡ ಗ್ರಾಮ ಸಭೆಯು ಬೆಳಂದೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಮೇಶ್ವರಿ ಅಗಳಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ತಾಲೂಕು ಪಂಚಾಯಿತಿ ಉದ್ಯೋಗ ಖಾತರಿ ಸಹಾಯಕ ನಿರ್ದೇಶಕ ನವೀನ್ ಚರ್ಚಾನಿಯಂತ್ರಣ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಲೋಕನಾಥ್ ಬರೆಪ್ಪಾಡಿ ಮಾತನಾಡಿ, ಕುದ್ಮಾರಿನಲ್ಲಿ ಮದ್ಯದಂಗಡಿ ತೆರೆಯುವ ವದಂತಿ ಹಬ್ಬಿದೆ. ಇಲ್ಲಿ ಶಾಲೆ, ಅಂಗನವಾಡಿ ಕೆಂದ್ರ, ದೇವಸ್ಥಾನ, ಮಸೀದಿ ಹತ್ತಿರದಲ್ಲೇ ಇರುವುದರಿಂದ ಯಾವುದೇ ಕಾರಣಕ್ಕೂ ಮದ್ಯದಂಗಡಿ ತೆರೆಯಬಾರದು ಎಂದರು. ಈ ವೇಳೆ ಧ್ವನಿಗೂಡಿಸಿದ ಜನಜಾಗೃತಿ ವೇದಿಕೆಯ ವೇಣುಗೋಪಾಲ್ ಕಳುವಾಜೆ ಹಾಗೂ ಭರತ್ ನಡುಮನೆ ಬೆಳಂದೂರು ಪಂಚಾಯಿತಿ ವ್ಯಾಪ್ತಿಯಲ್ಲೇ ವೈನ್‍ಶಾಪ್ ಅಥವಾ ಬಾರ್ ತೆರೆಯಬಾರದು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಲಾಗುವುದು ಎಂದರು. ಸಭೆಯ ಪ್ರಾರಂಭದಲ್ಲಿ ಪಂಚಾಯಿತಿ ಪಿಡಿಓ ನವೀನ್ ಎ. ಗ್ರಾಮಸಭೆಯ ವರದಿ ವಾಚಿಸಿದರು. ವರದಿಗೆ ಸಂಬಂಧಪಟ್ಟಂತೆ ಮಾತನಾಡಿದ ಲೋಕನಾಥ್ ಬರೆಪ್ಪಾಡಿಯವರು ಆನ್‍ಲೈನ್ ಸೇವೆ ಸೇರಿದಂತೆ ಇನ್ನಿತರ ಸೇವೆ ಕುರಿತು ವರದಿಯಲ್ಲಿ ಪ್ರಸ್ತಾವಿಸಿದ್ದೀರಿ. ಆದರೆ, ಕೆಲವೊಮ್ಮೆ ಪಂಚಾಯಿತಿಯಲ್ಲಿ ಆರ್‍ಟಿಸಿ ಸಿಗುತ್ತಿಲ್ಲ. ಯಾಕೆ ಎಂದು ಪ್ರಶ್ನಿಸಿದರು. ಉತ್ತರಿಸಿದ ಪಿಡಿಓ ಕೆಲವೊಂದು ಸಂದರ್ಭ ಆರ್‍ಟಿಸಿಗೆ ಬಳಸುವ ಕಾಗದ ಪತ್ರ ಮುಗಿದಿರುತ್ತದೆ. ಜಿಲ್ಲಾ ಪಂಚಾಯಿತಿ ಕಚೇರಿಯಿಂದಲೂ ಪೂರೈಕೆ ಇಲ್ಲದ ಕಾರಣ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ತೊಂದರೆಯಾಗದಂತೆ ಕ್ರಮಕೈಗೊಳ್ಳುತ್ತನೆ ಎಂದರ. ಧ್ವಜ ಹಾರಿಸಿದವರಿಗೆ ಗೌರವ ಧನ 4320 ರೂ. ವರದಿಯಲ್ಲಿ ನಮೂದಿಸಲಾಗಿದೆ. ಆದರೆ, ಪಂಚಾಯಿತಿ ಸಿಬ್ಬಂದಿಯೇ ಧ್ವಜ ಹಾರಿಸುವುದರಿಂದ ಪತ್ಯೇಕವಾಗಿ ವೇತನ ನೀಡಲಾಗುತ್ತಿದೆಯೇ ಎಂದು ವೇಣುಗೋಪಾಲ್ ಕಳುವಾಜೆ ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಪಿಡಿಒ ಧ್ವಜ ಹಾರಿಸಿದ ಸಿಬ್ಬಂದಿಗೆ ದಿನವೊಂದಕ್ಕೆ 30 ರೂ. ನಂತೆ ಸರಕಾರದ ನಿಯಮದಂತೆ ಪಾವತಿಸಲಾಗುತ್ತಿದೆ ಎಂದರು.

ಬೆಳಂದೂರು ಗ್ರಾಮದ ಮೀಪಾಲು ಎಂಬಲ್ಲಿ ಸುಮಾರು 200ಕ್ಕಿಂತಲೂ ದೂರದ ಅಂತರದಲ್ಲಿ ವಿದ್ಯುತ್ ಕಂಬಗಳಿವೆ. ತಂತಿಗಳು ಹಳೆಯದಾಗಿ ಅಪಾಯಕಾರಿಯಾಗಿ ಕಂಡುಬರುತ್ತಿದೆ. ಕಂಬಗಳು ಶಿಥಿಲಾವಸ್ಥೆಯಲ್ಲಿದ್ದು ಅಪಾಯ ಸಂಭವಿಸುವ ಮುಂಚೆ ಪರಿಶೀಲಿಸಿ, ದುರಸ್ಥಿಪಡಿಸುವಂತೆ ಸವಣೂರು ಶಾಖಾ ಮೆಸ್ಕಾಂ ಜೆಇ ನಾಗರಾಜ್ ಅವರಲ್ಲಿ ವಸಂತ ಕಾರ್ಕಳ ಮನವಿ ಮಾಡಿಕೊಂಡರು. ಅಲ್ಲಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಸರ್ವೆಗಿಂತ ಮುಂಚೆ ತಿಳಿಸಿ
ಆಲಂಕಾರಿನಲ್ಲಿ 110 ಕೆವಿ ವಿದ್ಯುತ್ ಉಪಕೇಂದ್ರ ನಿರ್ಮಾಣವಾಗುವ ನಿಟ್ಟಿನಲ್ಲಿ ಮಾಡಾವಿನಿಂದ ಬೆಳಂದೂರು ಆಗಿ ಆಲಂಕಾರಿಗೆ ಹೆಚ್‍ಟಿ ಲೈನ್ ಎಳೆಯುವ ಯೋಜನೆ ಕೆಪಿಟಿಸಿಎಲ್, ಮೆಸ್ಕಾಂ ಇಲಾಖೆಯ ಮುಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಬೆಳಂದೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ಮಾಡುವುದಕ್ಕಿಂತ ಮುಂಚೆ ಕೃಷಿಕರಿಗೆ ತಿಳಿಸಬೇಕು. ಗ್ರಾಮಸಭೆಯಲ್ಲಿ ಈ ಕುರಿತು ನಿರ್ಣಯಿಸಬೇಕೆಂದು ತನಿಯಪ್ಪ ನಾಯ್ಕ, ಸೀತಾರಾಮ, ದಾಮೋಧರ್ ಬರೆಪ್ಪಾಡಿ, ರತನ್ ಕಾರ್ಲಾಡಿ ಒತ್ತಾಯಿಸಿದರು. ವಿವಿದ ಇಲಾಖಾದಿಕಾರಿಗಳು ಇಲಾಕಾವಾರು ಮಾಹಿತಿ ನೀಡಿದರು. ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಕೆ., ಸದಸ್ಯೆ ಲಲಿತಾ ಈಶ್ವರ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹರೀಶ್ ಕೆರೆನಾರು, ಸದಸ್ಯರಾದ ಜಯಂತ ಅಬೀರ, ವಿಠಲ ಗೌಡ ಅಗಳಿ, ನಝೀರ್ ದೇವಸ್ಯ, ರತ್ನಾವತಿ, ಶೋಭ ಮರಕ್ಕಡ, ಮೋಹನ ಅಗಳಿ, ಶೋಭ, ಸಂಜೀವ ಗೌಡ ಕೂರ, ಮೇದಪ್ಪ ಕೆಡೆಂಜಿ, ರುಕ್ಮೀಣಿ ಕಡಮ್ಮಾಜೆ, ಪಾರ್ವತಿ ಬಿ., ಗೌರಿ ಸಂಜಿವ, ತೇಜಾಕ್ಷಿ ಕೊಡಂಗೆ ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group