(ನ್ಯೂಸ್ ಕಡಬ) newskadaba.com ಮಂಗಳೂರು, ಜು.17. ಶಿರಾಡಿಘಾಟ್ ರಸ್ತೆಯ ಕಾಮಗಾರಿಯು ಪೂರ್ಣಗೊಂಡು ಜುಲೈ 15 ರಂದು ಉದ್ಘಾಟನೆಗೊಂಡು ಸಾರ್ವಜನಿಕರ ಹಿತದೃಷ್ಟಿಯಿಂದ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತಾದರೂ, ಸದ್ರಿ ರಸ್ತೆ ಕಾಮಗಾರಿಯಲ್ಲಿ ಗಾರ್ಡ್ ವಾಲ್ ಹಾಗೂ ಶೋಲ್ಡರ್ ನಿರ್ಮಾಣದಂತಹ ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇರುವುದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸುವ ಸಲುವಾಗಿ ಘಾಟ್ ರಸ್ತೆಯಲ್ಲಿ ನಾಳೆಯಿಂದ ಭಾರೀ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಅಪೂರ್ಣಗೊಂಡ ರಸ್ತೆಯ ಮೂಲಕ ಭಾರೀ ವಾಹನಗಳು ಸಂಚರಿಸಿದಲ್ಲಿ ಈಗಾಗಲೇ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿದಲ್ಲಿ ತುರ್ತಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಭಾರೀ ವಾಹನಗಳ ಸಂಚಾರಕ್ಕೆ ಈ ಹಿಂದೆ ಪರ್ಯಾಯ ರಸ್ತೆಗಳನ್ನು ಗುರುತಿಸಲಾಗಿರುತ್ತದೆ. ಆದ್ದರಿಂದ ಸದ್ರಿ ಬಾಕಿ ಇರುವ ಕಾಮಗಾರಿಗಳನ್ನು ಮುಕ್ತಾಯಗೊಳಿಸುವ ದೃಷ್ಟಿಯಿಂದ ಶಿರಾಡಿ ಘಾಟ್ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ಜುಲೈ 18 ರಂದು ಬೆಳಿಗ್ಗೆ 6 ಗಂಟೆಯಿಂದ ಕಾಮಗಾರಿ ಮುಕ್ತಾಯಗೊಳ್ಳುವವರೆಗೆ ನಿಷೇಧಿಸಿ ದ.ಕ ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಅವರು ಆದೇಶಿಸಿದ್ದಾರೆ.
ಸಂಚರಿಸಬಹುದಾದ ಲಘು ವಾಹನಗಳು(ಗುಂಪು ಎ)-ಕಾರುಗಳು, ಜೀಪು, ವ್ಯಾನ್, ಎಲ್.ಸಿ.ವಿ(ಮಿನಿ ವ್ಯಾನ್) ಹಾಗೂ ದ್ವಿಚಕ್ರ ವಾಹನಗಳು. ನಿರ್ಬಂಧಿಸಲಾದ ಭಾರೀ ವಾಹನಗಳು(ಗುಂಪು ಬಿ)-ಸಾಮಾನ್ಯ ಬಸ್ಸು, ರಾಜಹಂಸ, ಐರಾವತ ಬಸ್ಸುಗಳು, ಖಾಸಗಿ ಲಕ್ಸುರಿ ಬಸ್ಸು, ಬುಲೆಟ್ ಟ್ಯಾಂಕರ್ಸ್, ಷಿಪ್ ಕಾರ್ಗೋ, ಕಂಟೈನರ್ಸ್ ಹಾಗೂ ಲಾಂಗ್ ಚಾಸೀಸ್ ವಾಹನಗಳು.