ಅಣಬೆ ಪ್ರಾಕೃತಿಕ ಆಹಾರ ಇದರ ಬಗ್ಗೆ ಜನತೆಗೆ ಇರಲಿ ಎಚ್ಚರ…!!!

(ನ್ಯೂಸ್ ಕಡಬ) newskadaba.com ಆಲಂಕಾರು,ಜು.14. ಜುಲೈ ತಿಂಗಳು ಕಳೆದು ಆಗಸ್ಟ್ ತಿಂಗಳು ಆರಂಭವಾಗುತ್ತಿದ್ದಂತೆ ಅಬ್ಬರಿಸುವ ಗುಡುಗು. ನಡು ನಡುವೆ ಮಳೆ ಈ ಮಳೆ ಮತ್ತು ಗುಡುಗಿಗೆ ಗುಡ್ಡೆಗಳಲ್ಲಿ, ತೋಟದ ಬದುಗಳಲ್ಲಿ ರಾತ್ರಿ ಬೆಳಗಾಗುವುದೊರೋಳಗೆ ತಲೆ ಎತ್ತಿ ನಿಲ್ಲುವ ಅತಿಥಿಯೇ “ಅಣಬೆ”. ಇದು ಅತ್ಯುತ್ತಮ ಪೌಷ್ಕಿಕಾಂಶಗಳನ್ನು ಒಳಗೊಂಡ ನೈಸಗರ್ಿಕ ಆಹಾರವಾಗಿದೆ. ಪ್ರಾಕೃತಿಕವಾಗಿ ಸಿಗುವ ಈ ಆಹಾರ ಪದಾರ್ಥದ ಬಗ್ಗೆ ಜಾಗರೂಕತೆ ಅತ್ಯವಶ್ಯವಾಗಿದೆ.

ವಿಷಕಾರಿ ಅಣಬೆಗಳ ಬಗ್ಗೆ ಎಚ್ಚರವಹಿಸಿ
ಅಣಬೆಗಳಲ್ಲಿ ವಿಷಕಾರಿ ಅಣಬೆಗಳು ಕೂಡ ಬಹಳಷ್ಟಿದೆ. ಇವುಗಳನ್ನು ಪತ್ತೆ ಮಾಡುವುದು ಸ್ವಲ್ಪ ಕಷ್ಟವಾದರೂ ಕೆಲವೊಂದನ್ನು ನೋಡುವಾಗಲೇ ವಿಷಕಾರಿ ಅಣಬೆಗಳೆಂದು ತಿಳಿಯುತ್ತದೆ.ಅಮಾನಿಟಿ ಫೆಲ್ಲಾಯ್ಡಿಸ್ ಎಂಬ ಅಣಬೆ ಅತ್ಯಂತ ವಿಷಕಾರಿ ಅಣಬೆ. ಇದಕ್ಕೆ ಬೆಳ್ಳಗಿರುವ ತೊಟ್ಟಿದ್ದು, ದೊಡ್ಡ ಹಸಿರು ಮಿಶ್ರಿತ ಬಿಳುಪಿನ ವೃತ್ತಾಕಾರದ ಟೋಪಿ ಇದ್ದು ಅದರಲ್ಲಿರುವ ಪದರಗಳು ಮೊದಲು ಬೆಳ್ಳಗಿದ್ದು, ಬಳಿಕ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದನ್ನು ಸೇವಿಸಿದರೆ ಹೊಟ್ಟೆನೋವು, ವಾಂತಿಬೇಧಿ ಕಾಣಿಸಿಕೊಳ್ಳುತ್ತದೆ. ನಾಲ್ಕೈದು ದಿನಗಳಲ್ಲಿ ಸಾವು ಕೂಡ ಸಂಭವಿಸಬಹುದು. ಇನ್ನೊಂದು ಕಪ್ಪು ಬಣ್ಣದ,ಹಳದಿ ಎಲೆಗಳನ್ನು ಹೊಂದಿದ ಅಮಾನಿಟಿ ಮ್ಯಾಕ್ಸೆರಿಯಾ ಎಂಬ ಅಣಬೆಯೂ ವಿಷಕಾರಿ. ಆದ್ದರಿಂದ ಜಾಗೂರುಕತೆಯಿಂದ ಬಳಕೆ ಮಾಡಬಹುದಾದ ಅಣಬೆಗಳನ್ನು ಮಾತ್ರ ಆರಿಸುವುದು ಸೂಕ್ತ.ಅಣಬೆಗಳ ಸೇವನೆಯಿಂದ ಯಾವುದಾದರೂ ತೊಂದರೆ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನೇ ಸಂಪರ್ಕಿಸುವುದು ಒಳಿತು.

ಗ್ರಾಮೀಣ ಪ್ರದೇಶಗಳಲ್ಲಿ ಸಿಗುವ ಅಣಬೆಗಳು
ಅಣಬೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಸುಮಾರು 10ರಿಂದ 15ಕ್ಕೂ ಹೆಚ್ಚು ಅಣಬೆಗಳು ಕಾಣಸಿಗುತ್ತವೆ, ಆದರೆ ಹಳ್ಳಿಗಳಲ್ಲಿ ಮುಖ್ಯವಾಗಿ ನಾಯಿಂಬ್ರೆ, ಸುಳಿರ್, ಮುಟ್ಟಲಂಬು, ಪರೆಲ್ ಅಲಂಬು, ಬೊಲ್ಲೆಂಜಿರ್,ಕಲ್ಲಂಲಂಬು,ಮರದ ಅಲಂಬು,ಬಿದಿರಿನ ಅಲಂಬು, ಬೈಹುಲ್ಲಿನ ಅಲಂಬು ಇತ್ಯಾದಿ. ಇವೆಲ್ಲವೂ ಕೂಡ ಆಟಿ ಮತ್ತು ಸೋಣ ತಿಂಗಳಲ್ಲಿ ಹುಟ್ಟಿಕೊಳ್ಳುವ ಅಣಬೆಗಳಾಗಿವೆ. ಇನ್ನು ಅಣಬೆಗಳನ್ನು 3 ವಿಧಗಳಾಗಿ ವಿಗಂಡಿಸಬಹುದು. 1.ಬೇರು ಅಣಬೆ: ಇವು ಜುಲೈ ತಿಂಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇವುಗಳು ಗೆದ್ದಲಿನ ಹುತ್ತಗಳಲ್ಲಿ, ಫಲವತ್ತಾದ ಮಣ್ಣಿನಲ್ಲಿ ಹುಟ್ಟುತ್ತವೆ.ಇವುಗಳನ್ನು ಕಿತ್ತಾಗ ಉದ್ದನೆಯ ಬೇರು ಇರುತ್ತದೆ. ಉದಾಹರಣಗೆ ತುಳುವಿನ ನಾಯಿಂಬ್ರೆ. ಸುಳಿರ್ ಇತ್ಯಾದಿ. 2.ದರಗು ಅಣಬೆ: ಇವುಗಳು ಗಾತ್ರದಲ್ಲಿ ಸಣ್ಣದಾಗಿದ್ದು, ಕಾಫಿ ತೋಟ, ಕಾಡುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಕೊಳೆತ ಎಲೆಗಳ ಮೇಲೆ ಹುಟ್ಟಿಕೊಳ್ಳುವ ಈ ಅಣಬೆಗಳು ತಿನ್ನಲು ಬಲು ರುಚಿಯಾಗಿರುತ್ತದೆ.3.ಬರ್ಕಟ್ಟೆ ಅಣಬೆ: ಛತ್ರಿಯಂತೆ ಎದ್ದು ನಿಲ್ಲುವ ಇಂತಹ ಅಣಬೆಗಳು ಒಂದೇ ಕಡೆಯಲ್ಲಿ 10ರಿಂದ `15 ದಿನಗಳ ಕಾಲ ಹುಟ್ಟುತ್ತವೆ. ತುಳುವಿನಲ್ಲಿ ಸುಳಿರ್ ಅಣಬೆ ಎಂತಲೂ ಕರೆಯುತ್ತಾರೆ. ಕಲ್ಲಂಣಬೆ( ಕಲ್ಲಂಲಂಬು)ಗೆ ಎಲ್ಲಿಲ್ಲದ ಬೇಡಿಕೆ ಇದೆ. ಕೆ.ಜಿಗೆ 150ರಿಂದ 200 ರುಪಾಯಿಗೆ ಮಾರಾಟವಾಗುತ್ತದೆ.

ಅಣಬೆ ಕೀಳುವಾಗ ಇರಲಿ ಎಚ್ಚರ
ಅಣಬೆಗಳನ್ನು ಕೀಳುವಾಗಲೂ ಬಹಳ ಎಚ್ಚರವಹಿಸಬೇಕಾಗಿದೆ. ರಾಶಿರಾಶಿಯಾಗಿ ಹುಟ್ಟುವ ಅಣಬೆಯನ್ನು ಒಬ್ಬರೆ ಕೀಳುವುದು ಅಪಾಯ. ಈ ಅಣಬೆಗಳ ನಡುವಲ್ಲಿ ನಾಗರಹಾವು ವಾಸಿಸುತ್ತದೆ. ಅದಕ್ಕೆ ಎಲ್ಲಾದರೂ ಮುಟ್ಟ ಅಲಂಬು(ರಾಶಿ ಅಣಬೆ) ಕಂಡರೆ ಅಕ್ಕಪಕ್ಕದವರನ್ನು ಕೂಗಿ ಕರೆದು ಎಲ್ಲರೂ ಹೋಗಿ ಕೀಳುತ್ತಾರೆ. ಇದು ತುಳುವರ ನಂಬಿಕೆಯಾದರೂ ಇದರ ಹಿಂದೆ ಜಾಗೃತಿಯ ಅರಿವು ಕೂಡ ಇದೆ. ಅಣಬೆಯನ್ನು ಹೆಚ್ಚಾಗಿ ಕ್ರಿಮಿಕೀಟಗಳು ತಿನ್ನುತ್ತವೆ. ಈ ಕೀಟಗಳನ್ನು ತಿನ್ನಲು ಹಾವುಗಳು ಅಣಬೆಯ ಬುಡದಲ್ಲಿ ಬಂದು ವಾಸಿಸುತ್ತವೆ. ಒಬ್ಬರೇ ಹೋಗಿ ಸದ್ದಿಲ್ಲದೆ ಅಣಬೆ ಕೀಳುವ ಬದಲು ಗುಂಪಾಗಿ ಹೋದರೆ ಬೊಬ್ಬೆಗೆ ಹಾವುಗಳು ಇದ್ದರೆ ಓಡಿ ಹೋಗುತ್ತವೆ ಎನ್ನುವು ವಿಚಾರವೂ ಇರಬಹುದು. ಅಣಬೆಯ ಪದಾರ್ಥಕ್ಕೆ ಬೆಂಕಿಯಲ್ಲಿ ಕಾಯಿಸಿದ ಕಬ್ಬಿಣವನ್ನು ಮುಳುಗಿಸಿ ತೆಗೆಯಬೇಕು ಎನ್ನುವ ನಂಬಿಕೆಯೂ ಇದೆ.

ವಿವಿಧ ಖಾದ್ಯಗಳು
ಅಣಬೆಗಳಲ್ಲಿ ಸಕ್ಕರೆ, ಕೊಬ್ಬಿನಾಂಶಗಳು ಕಡಿಮೆ ಇರುವುದರಿಂದ ಮಧುಮೇಹಿಗಳು, ಹೃದ್ರೋಗ ಇತ್ಯಾದಿ ಸಮಸ್ಯೆಯಿಂದ ಬಳಲುತ್ತಿರುವವರು ಕೂಡ ಅಣಬೆಗಳನ್ನು ಉಪಯೋಗಿಸಬಹುದಾಗಿದೆ. ಮಕ್ಕಳಿಗೆ ಇದೊಂದು ಅತ್ಯುತ್ತಮ ಆಹಾರವಾಗಿದ್ದು, ರೋಗ ನಿರೋಧಕ ಶಕ್ತಿಕೂಡ ಹೆಚ್ಚಿಸಿ ಮಕ್ಕಳ ಬೆಳವಣಿಗೆಯಲ್ಲಿ ಅಣಬೆಗಳು ಸಹಕಾರಿಯಾಗಿವೆ. ನಾವು ಕೃತಕವಾಗಿ ಬೆಳೆಯುವ ಅಣಬೆಗಿಂತಲೂ ನೈಸರ್ಗಿಕವಾಗಿ ಸಿಗುವ ಅಣಬೆಗಳು ರುಚಿಕರವಾಗಿರುತ್ತದೆ. ಅಣಬೆಗಳಿಂದ ಬಹಳಷ್ಟು ಆಹಾರ ಖಾದ್ಯಗಳನ್ನು ಮಾಡಬಹುದಾಗಿದೆ. ಮುಖ್ಯವಾಗಿ ಅಣಬೆ ಮಸಾಲ, ಅಣಬೆ ಗಸಿ, ಅಣಬೆ ಪುಳಿಪುಂಚಿ, ಅಣಬೆ ಪದಾರ್ಥ, ಅಣಬೆ ಪಲ್ಯ, ಅಣಬೆ ಸುಕ್ಕ, ಅಣಬೆ ಸಾಂಬಾರ್ ಇತ್ಯಾದಿ. ಅಣಬೆಯೊಂದಿಗೆ ಹಲಸಿನ ಕಾಯಿ ಬೀಜವನ್ನು ಗುದ್ದಿ ಹಾಕಿದರೆ ಅದರ ರುಚಿಯನ್ನು ಸವಿದವರೇ ಬಲ್ಲರು. ಅಣಬೆಯನ್ನು ಸೌತೆಕಾಯಿಯೊಂದಿಗೆ ಹೆಚ್ಚಾಗಿ ಪದಾರ್ಥ ಮಾಡುತ್ತಾರೆ.

error: Content is protected !!

Join the Group

Join WhatsApp Group