ಕಡಬ, ಜೂ.12. ಕಳೆದ ಕೆಲವು ದಿನಗಳಿಂದ ಘಟ್ಟ ಪ್ರದೇಶ ಹಾಗೂ ಸ್ಥಳೀಯವಾಗಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಗೆ ಅಡ್ಡಲಾಗಿರುವ ಗುಂಡ್ಯ ಹೊಳೆಯ ಹೊಸಮಠ ಮುಳುಗು ಸೇತುವೆಯು ಮಂಗಳವಾರದಂದು ಮತ್ತೆ ಮುಳುಗಿದೆ.
ಸೋಮವಾರದಂದು ಬೆಳಗ್ಗೆ ನೆರೆ ನೀರಿನಿಂದ ಮುಳುಗಡೆಗೊಂಡು ರಾತ್ರಿಯವರೆಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದಾಗಿ ಸುಬ್ರಹ್ಮಣ್ಯ, ಕಡಬದಿಂದ ಉಪ್ಪಿನಂಗಡಿ ಪರಿಸರಕ್ಕೆ ತೆರಳುವವರು ಇಚ್ಲಂಪಾಡಿ -ನೆಲ್ಯಾಡಿ ಮೂಲಕ ಸುತ್ತು ಬಳಸಿ ಸಂಚರಿಸುವಂತಾಗಿದೆ. ಮುಳುಗಡೆಗೊಂಡ ಸೇತುವೆಯ ಪಕ್ಕದಲ್ಲಿ ನಿರ್ಮಾಣವಾದ ನೂತನ ಸೇತುವೆಯ ಸಂಪರ್ಕ ರಸ್ತೆ ಕಾಮಗಾರಿ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಸಂಚಾರ ಅಸಾಧ್ಯವಾಗಿದೆ. ಮಣ್ಣಿನಿಂದ ನಿರ್ಮಿತವಾದ ಸಂಪರ್ಕ ರಸ್ತೆ ಕೆಸರಿನಿಂದ ಕೂಡಿದ್ದು, ಇದೇ ಸೇತುವೆಯ ಮೂಲಕ ಕೆಲ ಬೈಕ್ ಸವಾರರು ಸಾರ್ವಜನಿಕರು ನಡೆದುಕೊಂಡೇ ಇನ್ನೊಂದು ಬದಿಗೆ ತೆರಳುತ್ತಿದ್ದಾರೆ. ಕಡಬ ಠಾಣಾ ಪೊಲೀಸರು ಹಾಗೂ ಗೃಹರಕ್ಷಕದಳದ ಸಿಬ್ಬಂದಿಗಳು ಸೇತುವೆಯ ಇಕ್ಕೆಡೆಗಳಲ್ಲೂ ಗೇಟ್ ಮುಚ್ಚಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ.