ಮಂಗಳೂರು: ದೋಣಿ ಮಗುಚಿ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

(ನ್ಯೂಸ್‌ ಕಡಬ) newskadaba.com, ಅ .31. ಬಪ್ಪನಾಡುವಿನ ಬಡಗುಹಿತ್ಲು ಶಾಂಭವಿ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ದೋಣಿ ಮಗುಚಿ ನಾಪತ್ತೆಯಾಗಿದ್ದ ಕೊಕ್ರಾಣಿ ನಿವಾಸಿ ಡೇನಿಯಲ್ ಜಿ. ಫುಟಾಡೊ (65) ಅವರ ಮೃತದೇಹ ಶುಕ್ರವಾರ ನದಿಯಲ್ಲಿ ಪತ್ತೆಯಾಗಿದೆ.

ಕೊಕ್ರಾಣಿ ನಿವಾಸಿ ಡೇನಿಯಲ್ ಮತ್ತು ದುಬೈನಲ್ಲಿ ನೆಲೆಸಿರುವ ಅವರ ಸಹೋದರ ನೆಲ್ಸನ್ ಅವರು ಗುರುವಾರ ಸಂಜೆ ಹವ್ಯಾಸಿ ಮೀನುಗಾರಿಕೆಗಾಗಿ ಕೊಕ್ರಾಣಿ ಬಳಿಯಿಂದ ಸಣ್ಣ ದೋಣಿಯಲ್ಲಿ ಶಾಂಭವಿ ನದಿಗೆ ಇಳಿದಿದ್ದರು. ರಾತ್ರಿ ವೇಳೆ ಬಪ್ಪನಾಡುವಿನ ಬಡಗುಹಿತ್ಲು ಬಳಿ ಅವರು ಬೀಸಿದ್ದ ಮೀನುಗಾರಿಕಾ ಬಲೆ ಕಲ್ಲಿಗೆ ಸಿಲುಕಿಕೊಂಡಿತ್ತು. ಬಲೆಯನ್ನು ಬಿಡಿಸಲು ಯತ್ನಿಸುತ್ತಿದ್ದಾಗ ದೋಣಿ ಮಗುಚಿದ್ದು, ನೀರಿನ ರಭಸಕ್ಕೆ ಕೊಚ್ಚಿಹೋದ ಡೇನಿಯಲ್ ನಾಪತ್ತೆಯಾಗಿದ್ದರು. ಅವರ ಸಹೋದರ ನೆಲ್ಸನ್ ಈಜಿ ದಡ ತಲುಪಿ ಪ್ರಾಣಾಪಾಯದಿಂದ ಪಾರಾಗಿದ್ದರು.

ಗುರುವಾರ ರಾತ್ರಿಯೇ ಶೋಧ ಕಾರ್ಯ ಆರಂಭಿಸಲಾಗಿದ್ದರೂ ಯಾವುದೇ ಫಲ ಸಿಕ್ಕಿರಲಿಲ್ಲ. ಶುಕ್ರವಾರ ಎನ್‌ಡಿಆರ್‌ಎಫ್ ತಂಡ, ಪೊಲೀಸ್ ಉಪನಿರೀಕ್ಷಕರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯವನ್ನು ಚುರುಕುಗೊಳಿಸಿದರು. ದೋಣಿ ಮಗುಚಿದ ಸ್ಥಳದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ಡೇನಿಯಲ್ ಅವರ ಮೃತದೇಹ ಪತ್ತೆಯಾಗಿದೆ.

ಡೇನಿಯಲ್ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಮುಂಬೈನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು. ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Scroll to Top