ವಂದೇ ಮಾತರಂ ಪೂರ್ಣ ಗಾಯನ ಕಡ್ಡಾಯ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

(ನ್ಯೂಸ್‌ ಕಡಬ) newskadaba.com, ಅ .28 . ವಂದೇ ಮಾತರಂನ ಸಂಪೂರ್ಣ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.ಧಾರ್ಮಿಕ ಸ್ವಾತಂತ್ರ್ಯ, ಜಾತ್ಯತೀತ ತತ್ವ ಮತ್ತು ವೈಯಕ್ತಿಕ ಹಕ್ಕುಗಳಿಗೆ ಸಂಬಂಧಿಸಿದ ಈ ವಿವಾದದ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠ ನಡೆಸಿತು.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರನ್ನೊಳಗೊಂಡ ನ್ಯಾಯಪೀಠವು ಬೌದ್ಧ ಕಾರ್ಯಕರ್ತರೊಬ್ಬರು ಹಾಗೂ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ.

ವಂದೇ ಮಾತರಂನ ಸಂಪೂರ್ಣ ಆವೃತ್ತಿಯನ್ನು ಹಾಡುವುದಕ್ಕೆ ಸಂಬಂಧಿಸಿದ ಸರ್ಕಾರದ ನಿರ್ದೇಶನಗಳ ಸಾಂವಿಧಾನಿಕ ಮಾನ್ಯತೆ ಈ ಅರ್ಜಿಗಳಲ್ಲಿ ಪ್ರಶ್ನಿಸಲಾಗಿದೆ.ನಾಗಪುರದ ಬೌದ್ಧ ಕಾರ್ಯಕರ್ತ ಬಿ.ಡಿ.ಬೋರ್ಕರ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ, ಕೇಂದ್ರ ಗೃಹ ಸಚಿವಾಲಯವು 2026ರ ಜನವರಿ 28 ಮತ್ತು ಜುಲೈ 9ರಂದು ಹೊರಡಿಸಿರುವ ನಿರ್ದೇಶನಗಳನ್ನು ಪ್ರಶ್ನಿಸಲಾಗಿದೆ. ಈ ನಿರ್ದೇಶನಗಳ ಮೂಲಕ ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಆರು ಚರಣಗಳ ಸಂಪೂರ್ಣ ಆವೃತ್ತಿಯನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವುದು ಧಾರ್ಮಿಕ ಸ್ವಾತಂತ್ರ್ಯ ಮತ್ತು ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ ಎಂಬುದು ಅವರ ವಾದವಾಗಿದೆ.
ವಂದೇ ಮಾತರಂನ ಮೊದಲ ಎರಡು ಚರಣಗಳು ಪ್ರಕೃತಿಯನ್ನು ಸ್ತುತಿಸುತ್ತವೆ. ಆದರೆ, ಮೂರರಿಂದ ಆರನೇ ಚರಣಗಳಲ್ಲಿ ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ದೇವತೆಗಳ ಉಲ್ಲೇಖಗಳಿವೆ. ಸಂಪೂರ್ಣ ಗೀತೆಯನ್ನು ಕಡ್ಡಾಯಗೊಳಿಸುವುದರಿಂದ ಧಾರ್ಮಿಕ ನಂಬಿಕೆಗಳ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿರುವವರ ಹಕ್ಕುಗಳಿಗೆ ಧಕ್ಕೆಯಾಗಬಹುದು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

Scroll to Top