
(ನ್ಯೂಸ್ ಕಡಬ) newskadaba.com, ಅ. 27 . ಪ್ರೀತಿಸಿ ಮದುವೆಯಾಗಿದ್ದ ಯುವತಿಯೊಬ್ಬಳನ್ನು, ವಿಚ್ಛೇದನ ನೀಡಲು ಒಪ್ಪಲಿಲ್ಲವೆಂಬ ಕಾರಣಕ್ಕೆ ಪತಿಯೇ ಪೆಟ್ರೋಲ್ ಸುಟ್ಟು ಭೀಕರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಬಿಹಾರದ ಸುಪೌಲ್ ಜಿಲ್ಲೆಯಲ್ಲಿ ನಡೆದಿದೆ.
ದಾಮಿನಿ ಕುಮಾರಿ (21) ಕೊಲೆಯಾದ ದುರ್ದೈವಿ. ಆರೋಪಿ ಸಂಜೀವ್ ಸಾಹ್ ಹಾಗೂ ದಾಮಿನಿ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿ, ಸುಮಾರು ಎರಡು ವರ್ಷಗಳ ಪ್ರೀತಿಯ ಬಳಿಕ 9 ತಿಂಗಳ ಹಿಂದೆಷ್ಟೇ ಮದುವೆಯಾಗಿದ್ದರು. ಆದರೆ ಇವರ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ, ಸಂಜೀವ್ ಸಂಬಂಧ ಕಡಿದುಕೊಳ್ಳಲು ಬಯಸಿ ವಿಚ್ಛೇದನಕ್ಕೆ ಒತ್ತಾಯಿಸಿದ್ದನು. ಆದರೆ ದಾಮಿನಿ ವಿಚ್ಛೇದನಕ್ಕೆ ಒಪ್ಪಿರಲಿಲ್ಲ.
ದಾಮಿನಿಯನ್ನು ಪೂರ್ವ ಕೋಸಿ ಏರಿಯಾದ ನಿರ್ಜನ ಪ್ರದೇಶ ಹಾಗೂ ಲಾಲ್ಮನ್ಪಟ್ಟಿ ಬಳಿಯ ಕಾಲುವೆ ಬಳಿಗೆ ಕರೆದೊಯ್ದಿದ್ದ ಆರೋಪಿ, ದಾರಿಯಲ್ಲಿ ಪೆಟ್ರೋಲ್ ಖರೀದಿಸಿ ಆಕೆಯ ಮೇಲೆ ಸುಟ್ಟು ಬೆಂಕಿ ಹಚ್ಚಿ ಪರಾರಿಯಾಗಿದ್ದನು. ಗಂಭೀರ ಗಾಯಗೊಂಡು ಒಡಾಡುತ್ತ ಬಂದ ದಾಮಿನಿಯನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸಂಜೀವ್ ಸಾಹ್ನನ್ನು ಬಂಧಿಸಿದ್ದು, ವಿಚಾರಣೆ ವೇಳೆ ತಾನೇ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೆ, ಆರೋಪಿಯ ತಂದೆ ಕಿನು ಸಾಹ್ನನ್ನು ಕೂಡ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪವನ್ ಕುಮಾರ್ ತಿಳಿಸಿದ್ದಾರೆ.




