
(ನ್ಯೂಸ್ ಕಡಬ) newskadaba.com, ಅ. 15 . ವಾಹನ ಚಾಲನಾ ಪರವಾನಗಿಪಡೆಯುವ ಮತ್ತು ನವೀಕರಿಸುವ ನಿಯಮಗಳನ್ನು ಮತ್ತಷ್ಟು ಸರಳಗೊಳಿಸಲು ಹಾಗೂ ಕಠಿಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಕೇಂದ್ರ ಮೋಟಾರು ವಾಹನ ಕಾಯ್ದೆಯಡಿ ಕರಡು ಅಧಿಸೂಚನೆ ಹೊರಡಿಸಲಾಗಿದ್ದು, ಸಾರ್ವಜನಿಕರ ಸಲಹೆ ಹಾಗೂ ಆಕ್ಷೇಪಣೆಗಳಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ.ಸುರಕ್ಷಿತ ಚಾಲನಾ ಟ್ಯುಟೋರಿಯಲ್ ಮೌಲ್ಯಮಾಪನ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಈ ಹಿಂದೆ ಇದ್ದ ಶೇ. 60 ಅಂಕಗಳ ಅರ್ಹತೆಯನ್ನು ಶೇ. 75ಕ್ಕೆ ಏರಿಸಲಾಗಿದೆ.
ಡಿಎಲ್ನಲ್ಲಿ ಹೆಸರು ಅಥವಾ ವಿಳಾಸ ತಿದ್ದುಪಡಿಗೆ ಅರ್ಜಿ ಸಲ್ಲಿಸಿದರೆ ಆರ್ಟಿಒ ಅಧಿಕಾರಿಗಳು 15 ದಿನಗಳ ಒಳಗೆ ವಿಲೇವಾರಿ ಮಾಡಬೇಕು. ಒಂದು ವೇಳೆ 30 ದಿನಗಳವರೆಗೆ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ, ಅದನ್ನು ‘ಸ್ವಯಂಚಾಲಿತ ಅನುಮೋದನೆ’ ಎಂದು ಪರಿಗಣಿಸಲಾಗುತ್ತದೆ.ಆಧಾರ್ ದೃಢೀಕರಣದ ಮೂಲಕ ಆನ್ಲೈನ್ನಲ್ಲಿ ಪಡೆಯುವ ಆಯ್ದ ಡಿಎಲ್ ಸೇವೆಗಳಾದ ವೈಯಕ್ತಿಕ ವಿವರಗಳ ತಿದ್ದುಪಡಿ ಶುಲ್ಕವನ್ನು ಸಂಪೂರ್ಣವಾಗಿ ವಿನಾಯಿತಿ ನೀಡುವ ಪ್ರಸ್ತಾಪವಿದೆ.
ಗುರುತು ಮತ್ತು ವಿಳಾಸದ ಪುರಾವೆಗಾಗಿ ಆಧಾರ್, ಪಾಸ್ಪೋರ್ಟ್, ಮತದಾರರ ಗುರುತಿನ ಚೀಟಿ ಬಳಸಬಹುದು. ಆದರೆ, ಈವರೆಗೆ ವಿಳಾಸ ಪುರಾವೆಯಾಗಿ ಬಳಕೆಯಾಗುತ್ತಿದ್ದ ‘ಎಲ್ಐಸಿ ಪಾಲಿಸಿ ಬಾಂಡ್’ಗಳನ್ನು ಕೈಬಿಡಲಾಗಿದೆ.ಲೈಸೆನ್ಸ್ ನವೀಕರಣ, ನಕಲಿ ಲೈಸೆನ್ಸ್ ಅಥವಾ ಹೊಸ ವಾಹನ ವರ್ಗ ಸೇರಿಸಲು ‘ಸಾರಥಿ’ ಪೋರ್ಟಲ್ನಲ್ಲಿ ಒಂದೇ ಸಮಗ್ರ ಅರ್ಜಿಯನ್ನು ತರಲಾಗುತ್ತಿದ್ದು, ಸಾರ್ವಜನಿಕರ ಕಿರಿಕಿರಿ ತಪ್ಪಲಿದೆ.ಯಾರಾದರೂ ತಮ್ಮ ಲೈಸೆನ್ಸ್ನಿಂದ ನಿರ್ದಿಷ್ಟ ವಾಹನ ವರ್ಗವನ್ನು ರದ್ದುಪಡಿಸಿದರೆ 7 ದಿನಗಳಲ್ಲಿ ತೆಗೆದುಹಾಕಲಾಗುತ್ತದೆ. ಆದರೆ, ಅದೇ ವಾಹನ ವರ್ಗಕ್ಕೆ ಮುಂದಿನ 1 ವರ್ಷದವರೆಗೆ ಹೊಸ ಲರ್ನರ್ಸ್ ಅಥವಾ ಡಿಎಲ್ ಪಡೆಯಲು ಅವಕಾಶವಿರುವುದಿಲ್ಲ…




