ಕಾಶ್ಮೀರದ ಕಾಡಲ್ಲಿ ಉಗ್ರರ ರಹಸ್ಯ ಅಡಗುತಾಣ ಪತ್ತೆ!

ಗುಹೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹ ವಶಕ್ಕೆ

(ನ್ಯೂಸ್‌ ಕಡಬ) newskadaba.com, ಅ. 15 . ಭದ್ರತಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಈ ವೇಳೆ ಗುಹೆಯಲ್ಲಿದ್ದ ಉಗ್ರರ ಅಡಗುತಾಣವನ್ನು ಪತ್ತೆಹಚ್ಚಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ.

ಈ ಅಡಗುತಾಣದ ಬಗ್ಗೆ ಖಚಿತ ಮಾಹಿತಿ ಪಡೆದ ಭಾರತೀಯ ಸೇನೆಯ 60ನೇ ರಾಷ್ಟ್ರೀಯ ರೈಫಲ್ಸ್ ತುಕಡಿಯು, ಅರಣ್ಯ ಪ್ರದೇಶವನ್ನು ಸುತ್ತುವರಿದು ಶೋಧ ನಡೆಸಿದೆ. ಈ ವೇಳೆ ಕೋತ್ರಾಂಕಾ ತಹಸಿಲ್‌ನ ಪಂಚ್ ಗಬ್ಬಾರ್ ಪ್ರದೇಶದ ‘ಚೋರ್ ಹಿಲ್’ ಬಳಿ ಅಡಗುತಾಣ ಪತ್ತೆಯಾಗಿದೆ. ಗುಹೆಯಲ್ಲಿದ್ದ ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್ ಗ್ರೆನೇಡ್‌ಗಳು, ಒಂದು ಎಕೆ-47 ಮ್ಯಾಗಜೀನ್ ಮತ್ತು ಎಕೆ-47 ರೈಫಲ್‌ಗೆ ಬಳಸುವ 18 ಸುತ್ತು ಗುಂಡುಗಳನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಈ ಶಸ್ತ್ರಾಸ್ತ್ರಗಳನ್ನು ಸಮಯೋಚಿತವಾಗಿ ವಶಪಡಿಸಿಕೊಂಡಿರುವುದರಿಂದ, ಈ ಪ್ರದೇಶದಲ್ಲಿ ಉಗ್ರರು ನಡೆಸಲು ಉದ್ದೇಶಿಸಿದ್ದ ವಿಧ್ವಂಸಕ ಕೃತ್ಯಗಳನ್ನು ತಡೆದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಉಗ್ರರು ಆಗಾಗ ನೈಸರ್ಗಿಕ ಗುಹೆಗಳನ್ನು ಅಡಗುತಾಣಗಳಾಗಿ ಬಳಸಿಕೊಳ್ಳುತ್ತಾರೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾದ ಹಿನ್ನೆಲೆ ಪ್ರದೇಶದಲ್ಲಿ ಹೆಚ್ಚಿನ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

Scroll to Top