
52 ನಕಲಿ ಎಸ್ಎಸ್ಎಲ್ಸಿ ಅಂಕಪಟ್ಟಿಗಳು ಪತ್ತೆ, ಸಿಬ್ಬಂದಿ ಅಮಾನತು!
(ನ್ಯೂಸ್ ಕಡಬ) newskadaba.com, ಅ. 16. ಹೈದರಾಬಾದ್-ಕರ್ನಾಟಕ ಕೇಡರ್ ಅಡಿಯಲ್ಲಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 2015-16ರಲ್ಲಿ ನೇಮಕಗೊಂಡಿದ್ದ 52 ‘ಗ್ರೂಪ್ ಡಿ’ ನೌಕರರು ನಕಲಿ ಎಸ್ಎಸ್ಎಲ್ಸಿ ಅಂಕಪಟ್ಟಿಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕೇವಲ 230 ಅಂಕಗಳನ್ನು ಪಡೆದಿದ್ದ ಅಭ್ಯರ್ಥಿಗಳ ಅಂಕಗಳನ್ನು, ಅಂಕಪಟ್ಟಿಗಳಲ್ಲಿ 625ಕ್ಕೆ 560 ರಿಂದ 586ರ ವರೆಗೆ ಹೆಚ್ಚಿಸಿ ನಕಲಿ ದಾಖಲೆ ಸೃಷ್ಟಿಸಲಾಗಿದೆ.ನೇಮಕಾತಿ ಸಮಯದಲ್ಲಿ ಕೆಎಸ್ಇಎಬಿ ಹೆಸರಿನಲ್ಲಿ ನೀಡಲಿದ್ದ ದೃಢೀಕರಣ ಪತ್ರಗಳು ಸಹ ನಕಲಿ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಇಲಾಖೆಯ ಆದೇಶದಂತೆ ಆರೋಪಿ ನೌಕರರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಇವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.ಅಮಾನತುಗೊಂಡಿರುವ ನೌಕರರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ಜೀವನಾಧಾರ ಭತ್ಯೆ ದೊರೆಯಲಿದ್ದು, ಇವರನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ.




