ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಪತ್ರಕರ್ತರಾಗಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನುಡಿ!

ನ್ಯೂಸ್‌ ಕಡಬ) newskadaba.com, ಅ. 16. ಮೊಬೈಲ್ ಹಿಡಿದ ಪ್ರತಿಯೊಬ್ಬರೂ ಪತ್ರಕರ್ತರಾಗಲು ಆರಂಭಿಸಿದರೆ ಸಮಸ್ಯೆಗಳು ಎದುರಾಗಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.ಪ್ರತಿಭಟನೆಗಳನ್ನು ವರದಿ ಮಾಡುವ ಸ್ವತಂತ್ರ ಪತ್ರಕರ್ತರು ಮತ್ತು ಸಾಮಾಜಿಕ ಮಾಧ್ಯಮದ ಕಂಟೆಂಟ್ ಕ್ರಿಯೇಟರ್‌ಗಳಿಗೆ ಪೊಲೀಸರು ಅಡ್ಡಿಪಡಿಸಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತು.

‘ಮಾಧ್ಯಮ ಸಂಸ್ಥೆಗಳ ಗುರುತಿನ ಚೀಟಿ ಹೊಂದಿರುವ ಪತ್ರಕರ್ತರು ತಮ್ಮ ವೃತ್ತಿಪರ ಕೆಲಸ ಮಾಡಲು ಅವಕಾಶ ನೀಡುವಂತೆ ಪೊಲೀಸರಿಗೆ ಮಾರ್ಗಸೂಚಿ ರೂಪಿಸಬೇಕು’ ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ವಾದ ಮಂಡಿಸಿದರು.ವಾದ ವಿವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, “ನಾವು ಈ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಪ್ರತಿಯೊಬ್ಬರೂ ತಾವೇ ಪತ್ರಕರ್ತರೆಂದು ಹೇಳಿಕೊಳ್ಳಲು ಶುರುಮಾಡಿದರೆ ಅದು ಎಲ್ಲರಿಗೂ ತಲೆನೋವಾಗಿ ಪರಿಣಮಿಸುತ್ತದೆ” ಎಂದರು.

“ಅಭಿವ್ಯಕ್ತಿ ಸ್ವಾತಂತ್ರ‍್ಯದ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಪತ್ರಕರ್ತನಾಗುವ ಹಕ್ಕು ನೀಡುತ್ತದೆಯೇ ಎಂಬುದನ್ನು ಪರಿಶೀಲಿಸಬೇಕಿದೆ. ಮಾನ್ಯತೆ ಪಡೆದ ಪತ್ರಕರ್ತರು, ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಸ್ವತಂತ್ರ ಪತ್ರಕರ್ತರು ಮತ್ತು ಸಾಮಾಜಿಕ ಮಾಧ್ಯಮದ ಕಂಟೆಂಟ್ ಕ್ರಿಯೇಟರ್‌ಗಳಿಗೆ ಯಾವ ರೀತಿಯ ರಕ್ಷಣೆ ನೀಡಬೇಕು ಎಂಬುದನ್ನು ನ್ಯಾಯಾಲಯ ಪರಿಗಣಿಸಬೇಕಿದೆ” ಎಂದು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ತಿಳಿಸಿದರು.

ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, “ಇಂದಿನ ಡಿಜಿಟಲ್ ಕಾಲದಲ್ಲಿ ಕೈಯಲ್ಲೊಂದು ಸ್ಮಾರ್ಟ್ಫೋನ್ ಇದ್ದರೆ ಸಾಕು, ತಾವೇ ಪತ್ರಕರ್ತರೆಂದು ಹೇಳಿಕೊಳ್ಳುತ್ತಿದ್ದಾರೆ. ಕೇವಲ ಲೈಕ್ಸ್, ವ್ಯೂವ್ಸ್ ಮತ್ತು ಹಣ ಗಳಿಸಲು ಘಟನೆಗಳನ್ನು ತಿರುಚಿ ಸಂವೇದನಾಶೀಲ ರೀಲ್ಸ್ಗಳನ್ನು ಮಾಡುತ್ತಿದ್ದಾರೆ. ಇಂಥವರಿಗೂ ಪತ್ರಕರ್ತರ ಸ್ಥಾನಮಾನ ಮತ್ತು ರಕ್ಷಣೆ ನೀಡಲು ಸಾಧ್ಯವಿಲ್ಲ. ಮಹಿಳಾ ಪತ್ರಕರ್ತರ ಘನತೆ ಕಾಪಾಡುವಷ್ಟೇ ಸಮಾನವಾಗಿ ಕರ್ತವ್ಯದಲ್ಲಿರುವ ಮಹಿಳಾ ಪೊಲೀಸ್ ಸಿಬ್ಬಂದಿಯ ಸುರಕ್ಷತೆಯನ್ನೂ ರಕ್ಷಿಸಬೇಕು” ಎಂದು ವಾದಿಸಿದರು.

Scroll to Top