
(ನ್ಯೂಸ್ ಕಡಬ) newskadaba.com, ಅ. 15 . ನಿಷೇಧಿತ ಲಾಟರಿ ಟಿಕೆಟ್ಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಅಕ್ಟೋಬರ್ 14ರಂದು ಸಂಜೆ ಪುತ್ತೂರು ಕಸಬ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಅಂಗಡಿಯೊಂದರಲ್ಲಿ ಕೇರಳ ರಾಜ್ಯದ ಲಾಟರಿ ಟಿಕೆಟ್ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪುತ್ತೂರು ನಗರ ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕ ವಾಸು ನಾಯ್ಕ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಈ ವೇಳೆ ಅಂಗಡಿ ಮಾಲೀಕ, ಪುತ್ತೂರು ಕಸಬಾ ನಿವಾಸಿ ಶ್ರೀನಿವಾಸ ಪೈ (33) ಎಂಬವರನ್ನು ವಿಚಾರಣೆ ನಡೆಸಿದಾಗ, ಕೇರಳ ರಾಜ್ಯದ ಲಾಟರಿ ಟಿಕೆಟ್ಗಳನ್ನು ತಂದು ಹೆಚ್ಚಿನ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮಾರಾಟಕ್ಕಾಗಿ ಇಟ್ಟಿದ್ದ ಲಾಟರಿ ಟಿಕೆಟ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಇದೇ ರೀತಿ, ಪುತ್ತೂರು ಕಸಬ ಗ್ರಾಮದ ಲಿನೆಟ್ ಜಂಕ್ಷನ್ ಬಳಿಯ ಪಾನ್ ಸ್ಟಾಲ್ನಲ್ಲಿ ನಿಷೇಧಿತ ಲಾಟರಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅದರಂತೆ ಸಹಾಯಕ ಪೊಲೀಸ್ ಉಪನಿರೀಕ್ಷಕ ಗಂಗಾಧರ ಎ.ಬಿ. ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅಂಗಡಿ ಮಾಲೀಕ, ಪುತ್ತೂರು ಪಡ್ನೂರು ಗ್ರಾಮದ ನಿವಾಸಿ ಲಕ್ಷ್ಮಣ (42) ಎಂಬವರನ್ನು ವಿಚಾರಣೆ ನಡೆಸಿದಾಗ, ಕೇರಳದಿಂದ ಲಾಟರಿ ಟಿಕೆಟ್ಗಳನ್ನು ತಂದು ಅಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಮಾರಾಟಕ್ಕಾಗಿ ಇಟ್ಟಿದ್ದ ಲಾಟರಿ ಟಿಕೆಟ್ಗಳನ್ನು ವಶಪಡಿಸಿಕೊಂಡ ಪೊಲೀಸರು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ..




