ವಾಟ್ಸಾಪ್‌ನಲ್ಲೂ ಇನ್ಮುಂದೆ ತುಳು ಲಿಪಿಯಲ್ಲೇ ಚಾಟಿಂಗ್: ‘ಬರವು ಸರವು’ ಆ್ಯಪ್ ಉಚಿತ ಡೌನ್‌ಲೋಡ್

(ನ್ಯೂಸ್‌ ಕಡಬ) newskadaba.com, ಅ. 07. ಸಾಫ್ಟ್‌ವೇರ್ ಡೆವಲಪರ್‌ಗಳಾದ ಹರ್ಷಿತ್ ದೇವಾಡಿಗ ಮತ್ತು ಚೈತ್ರ ಪೂಜಾರಿ ಅವರು ‘ಕುರಲ್ ತುಳು ಟಚ್’ ಕೀಬೋರ್ಡ್ ಅಭಿವೃದ್ಧಿಪಡಿಸಿದ್ದು, ಇದು ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ ‘ಬರವು ಸರವು’ ಆ್ಯಪ್ ಮೂಲಕ ಉಚಿತವಾಗಿ ಲಭ್ಯವಿದೆ.

ಬೆಂಗಳೂರಿನಲ್ಲಿ ನಡೆದ ‘ತುಳುನಾಡ ಜಾನಪದ ಸಂಭ್ರಮ’ ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಈ ಕೀಬೋರ್ಡ್ ಅಧಿಕೃತವಾಗಿ ಬಿಡುಗಡೆಯಾಗಿದೆ.ವಾಟ್ಸಾಪ್ ಸೇರಿದಂತೆ ವಿವಿಧ ಆ್ಯಪ್‌ಗಳಲ್ಲಿ ನೇರವಾಗಿ ತುಳು ಲಿಪಿಯಲ್ಲೇ ಸಂದೇಶ ಕಳುಹಿಸಬಹುದು. ಜೊತೆಗೆ ತುಳು ಅಕ್ಷರಗಳು, ಸಂಖ್ಯೆಗಳು, ಒತ್ತಕ್ಷರ ಬೆಂಬಲ ಹಾಗೂ ಪಠ್ಯವನ್ನು ಚಾಟ್ ಸ್ಟಿಕ್ಕರ್‌ಗಳಾಗಿ ಪರಿವರ್ತಿಸುವ ಸೌಲಭ್ಯವಿದೆ.ಈ ಆ್ಯಪ್‌ನಲ್ಲಿ ತುಳು ನಿಘಂಟು, ಆಡಿಯೋ ಕಲಿಕಾ ಸಾಮಗ್ರಿಗಳು ಮತ್ತು ಸಾಂಸ್ಕೃತಿಕ ಛಾಯಾಚಿತ್ರಗಳಿದ್ದು, ತುಳು ಲಿಪಿ ಅಭ್ಯಾಸ ಮಾಡಲು ಸಮಗ್ರ ತರಬೇತಿ ಒದಗಿಸುತ್ತದೆ.

ಫ್ಲಟರ್ ಹಾಗೂ ಫೈರ್‌ಬೇಸ್ ತಂತ್ರಜ್ಞಾನ ಬಳಸಿ ರೂಪಿಸಲಾದ ಈ ಕೀಬೋರ್ಡ್‌ಗೆ ಯೂನಿಕೋಡ್ 16ರಲ್ಲಿ ತುಳು-ತಿಗಳಾರಿ ಲಿಪಿ ಸೇರ್ಪಡೆಯಾಗಿರುವುದು ಪ್ರಮುಖ ಪ್ರೇರಣೆಯಾಗಿದೆ. ಶೀಘ್ರದಲ್ಲೇ ಐಫೋನ್ (iOS) ಬಳಕೆದಾರರಿಗೂ ಇದು ಲಭ್ಯವಾಗಲಿದೆ.

Scroll to Top