ಬಂಟ್ವಾಳ: ಕಾರು ಡಿಕ್ಕಿಯಾಗಿ ರಸ್ತೆ ಬದಿ ತೆರಳುತ್ತಿದ್ದ ಕೂಲಿ ಕಾರ್ಮಿಕ ಸ್ಥಳದಲ್ಲೇ ಮೃತ್ಯು

(ನ್ಯೂಸ್‌ ಕಡಬ) newskadaba.com, ಅ .01. ಬಸ್ ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ದಾಸಕೋಡಿ ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ಬಾಳ್ತಿಲ ನಿವಾಸಿ ಹರೀಶ್ ನಾಯ್ಕ್ (46) ಮೃತಪಟ್ಟವರು.

ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಅವರು, ಸಂಜೆ ಕೆಲಸ ಮುಗಿಸಿ ಕಲ್ಲಡ್ಕ ಕಡೆಯಿಂದ ಬಸ್ ನಲ್ಲಿ ಮನೆಗೆ ತೆರಳುತ್ತಿದ್ದರು. ದಾಸಕೋಡಿಯಲ್ಲಿ ಬಸ್ ನಿಂದ ಇಳಿದು ರಸ್ತೆ ಬದಿಗೆ ತೆರಳುತ್ತಿದ್ದ ಸಂದರ್ಭ ಹಿಂಬದಿಯಿಂದ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದ ಕಾರು ಅವರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಹರೀಶ್ ನಾಯ್ಕ್ ಅವರು ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣ ಹಾಗೂ ಕಾರಿನ ಚಾಲಕನ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಪ್ರಕರಣದ ಬಗ್ಗೆ ತನಿಖೆ ಮುಂದುವರಿದಿದೆ.

Scroll to Top