ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಅಸ್ಸಾಂ ರೈಫಲ್ಸ್ ಮೇಲೆ ಉಗ್ರರ ದಾಳಿ – ಓರ್ವ ಯೋಧ ಹುತಾತ್ಮ, ನಾಲ್ವರಿಗೆ ಗಾಯ

(ನ್ಯೂಸ್‌ ಕಡಬ) newskadaba.com, ಸೆ. 29. ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ಭಾರತ-ಮ್ಯಾನ್ಮಾರ್ ಅಂತಾರಾಷ್ಟ್ರೀಯ ಗಡಿಯಲ್ಲಿ ಅಸ್ಸಾಂ ರೈಫಲ್ಸ್ ಪಡೆಯ ಗಸ್ತು ತಂಡದ ಮೇಲೆ ಶಂಕಿತ ಉಗ್ರರು ದಾಳಿ ನಡೆಸಿದ್ದಾರೆ. ಮಂಗಳವಾರ ಬೆಳಗ್ಗೆ ನಾಂಪೊಂಗ್ ನಲ್ಲಾ ಬಳಿ ನಡೆದ ದಾಳಿಯಲ್ಲಿ ಅಸ್ಸಾಂ ರೈಫಲ್ಸ್‌ನ ಓರ್ವ ಯೋಧ ಹುತಾತ್ಮರಾಗಿದ್ದು, ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ.

ನಾಂಪೊಂಗ್ ವೃತ್ತದ ವ್ಯಾಪ್ತಿಯಲ್ಲಿ ಬೆಳಗ್ಗೆ ಸುಮಾರು 6.30ರ ವೇಳೆಗೆ ಘಟನೆ ನಡೆದಿದೆ. ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಬೇಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ 21ನೇ ಅಸ್ಸಾಂ ರೈಫಲ್ಸ್‌ನ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ದಾಳಿ ನಡೆದಿದೆ ಎಂದು ವರದಿಯಾಗಿದೆ. ದಾಳಿಯಲ್ಲಿ ಹವಾಲ್ದಾರ್ ಜಂಖೋಕೈ ಕುಕಿ (42) ಮೃತಪಟ್ಟಿದ್ದಾರೆ. ಗಾಯಗೊಂಡ ನಾಲ್ವರು ಯೋಧರಿಗೆ ತಕ್ಷಣ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ದಾಳಿಯ ಬಳಿಕ ಭದ್ರತಾ ಪಡೆಗಳು ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿವೆ. ದಾಳಿಯ ಹಿಂದೆ ನಿಷೇಧಿತ ನಾಗಾ ಬಂಡುಕೋರ ಸಂಘಟನೆ NSCN (K-YA) ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಆದರೆ ದಾಳಿಕೋರರ ಗುರುತು ಕುರಿತು ಅಧಿಕೃತ ದೃಢೀಕರಣ ಇನ್ನಷ್ಟೇ ಬರಬೇಕಿದೆ ಎಂದು ವರದಿಗಳು ತಿಳಿಸಿವೆ.

ಚಾಂಗ್ಲಾಂಗ್ ಸೇರಿದಂತೆ ಅರುಣಾಚಲ ಪ್ರದೇಶದ ಭಾರತ-ಮ್ಯಾನ್ಮಾರ್ ಗಡಿ ಪ್ರದೇಶಗಳಲ್ಲಿ ಈ ಹಿಂದೆ ಕೂಡ ಅಸ್ಸಾಂ ರೈಫಲ್ಸ್ ಮೇಲೆ ಉಗ್ರ ದಾಳಿಗಳು ನಡೆದಿವೆ. ಆಗಸ್ಟ್ 14ರಂದು ಚಾಂಗ್ಲಾಂಗ್‌ನ ಲಾಂಗ್ವಿ ಪ್ರದೇಶದಲ್ಲಿರುವ 21ನೇ ಅಸ್ಸಾಂ ರೈಫಲ್ಸ್ ಶಿಬಿರದ ಮೇಲೂ ಶಂಕಿತ ULFA-I ಮತ್ತು NSCN-K-YA ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಇತ್ತೀಚಿನ ದಾಳಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ದಾಳಿಕೋರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

Scroll to Top