
(ನ್ಯೂಸ್ ಕಡಬ) newskadaba.com, ಸೆ. 29 .ದೇವಸ್ಥಾನಕ್ಕೆ ಮುಡಿ ಕೊಟ್ಟಿದ್ದ 12ನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಉಚಿತ ಟಿಕೆಟ್ ಕೇಳಿದ್ದಕ್ಕೆ, ಆಕೆಯನ್ನು ಹುಡುಗನೆಂದು ತಪ್ಪಾಗಿ ಭಾವಿಸಿ ಅವಮಾನಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಮಹೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ವಿದ್ಯಾರ್ಥಿನಿ ಜೀನ್ಸ್ ಮತ್ತು ಟಿ-ಶರ್ಟ್ ಧರಿಸಿದ್ದು, ಬಾಯ್‌ಕಟ್ ಶೈಲಿಯಲ್ಲಿ ಕೂದಲಿದ್ದ ಕಾರಣ ಕಂಡಕ್ಟರ್ ಆಕೆಗೆ ₹15 ടಿಕೆಟ್ ನೀಡಿದ್ದರು. ತಾನು ಹುಡುಗಿ ಎಂದು ಹೇಳಿ ಪ್ರಿಯದರ್ಶಿನಿ ಯೋಜನೆಯಡಿ ಶೂನ್ಯ ಮೌಲ್ಯದ ಉಚಿತ ಟಿಕೆಟ್ ಕೇಳಿದಾಗ, ಕಂಡಕ್ಟರ್ ‘ನೋಡಿದರೆ ಹುಡುಗಿಯಂತೆ ಕಾಣಿಸುತ್ತಿಲ್ಲ’ ಎಂದು ಕೀಳಾಗಿ ಮಾತನಾಡಿ ಬಸ್‌ನಿಂದ ಕೆಳಗಿಳಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ವಿದ್ಯಾರ್ಥಿನಿ ದೂರು ನೀಡಿದ್ದು, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 296 ಮತ್ತು 79ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಆರಂಭವಾಗುತ್ತಿದ್ದಂತೆ ಕ್ಷಮೆ ಯಾಚಿಸಿರುವ ಕಂಡಕ್ಟರ್, ತಾನು ಹುಡುಗನೆಂದು ತಪ್ಪಾಗಿ ಭಾವಿಸಿ ಹಾಗೆ ಮಾಡಿದ್ದಾಗಿ ಹೇಳಿಕೆ ನೀಡಿದ್ದಾರೆ.




