
(ನ್ಯೂಸ್ ಕಡಬ) newskadaba.com, ಸೆ. 29. ಸರ್ಕಾರ ಅಧಿಕೃತವಾಗಿ ಘೋಷಿಸಿರುವ ದಸರಾ ರಜೆಯ ಅವಧಿಯಲ್ಲಿ ತರಗತಿ ಅಥವಾ ಪರೀಕ್ಷೆಗಳನ್ನು ನಡೆಸುವ ಕ್ರಿಶ್ಚಿಯನ್ ಕಾನ್ವೆಂಟ್ ಶಾಲೆಗಳ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದ್ದಾರೆ.
ದಸರಾ ರಜೆಯ ಸಂದರ್ಭದಲ್ಲಿ ಶಾಲೆಗಳನ್ನು ನಡೆಸುವುದರಿಂದ ಹಿಂದೂ ವಿದ್ಯಾರ್ಥಿಗಳು ಸಾಂಸ್ಕೃತಿಕ ಹಬ್ಬದ ಆಚರಣೆಯಿಂದ ವಂಚಿತರಾಗುತ್ತಿದ್ದಾರೆ.ಸರ್ಕಾರವು ಅಕ್ಟೋಬರ್ 3ರಿಂದ 21ರವರೆಗೆ ರಜೆ ಘೋಷಿಸಿದ್ದರೂ, ಕೆಲವು ಕಾನ್ವೆಂಟ್ ಶಾಲೆಗಳು ಈ ಅವಧಿಯಲ್ಲಿ ಪರೀಕ್ಷೆ ಹಾಗೂ ಪಾಠಗಳನ್ನು ನಡೆಸುತ್ತಿವೆ.

ದಸರಾ ರಜೆ ಕಡಿತಗೊಳಿಸಿ ಕ್ರಿಸ್ಮಸ್‌ಗೆ ಹೆಚ್ಚುವರಿ ರಜೆ ನೀಡುವುದು ಅನ್ಯಾಯ.ನಿಯಮ ಉಲ್ಲಂಘಿಸಿ ಶಾಲೆ ನಡೆಸಿದರೆ ರಾಜ್ಯಾದ್ಯಂತ ಕಾನ್ವೆಂಟ್ ಶಾಲೆಗಳ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು.ಇದರೊಂದಿಗೆ, ಪ್ರಸಾದ್ ಅತ್ತಾವರ ಅವರ ಭೇಟಿಯ ನಂತರ ರಾಮ ಸೇನೆ ಮತ್ತು ಶ್ರೀರಾಮ ಸೇನೆ ಸಂಘಟನೆಗಳು ಇನ್ಮುಂದೆ ‘ಶ್ರೀರಾಮ ಸೇನೆ’ ಹೆಸರಿನಲ್ಲಿ ಒಂದಾಗಿ ಕಾರ್ಯನಿರ್ವಹಿಸಲಿವೆ ಎಂದು ಅವರು ತಿಳಿಸಿದರು.




