
(ನ್ಯೂಸ್ ಕಡಬ) newskadaba.com, ಸೆ.28 . ಅಲಂಕಾರು (ಕಡಬ): ಅಲಂಕಾರು ಗ್ರಾಮದ ಆಚಾರಿ ಕೊಟ್ಟಾಯ ಬಳಿ ಸೆಪ್ಟೆಂಬರ್ 25ರ ರಾತ್ರಿ ನಡೆದ ಹಿಟ್ ಆಂಡ್ ರನ್ ಪ್ರಕರಣವನ್ನು ಭೇದಿಸಿರುವ ಕಡಬ ಪೊಲೀಸರು, ಕಪ್ಪು ಬಣ್ಣದ ಥಾರ್ ಎಸ್‌ಯುವಿ ವಾಹನವನ್ನು ವಶಕ್ಕೆ ಪಡೆದು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಅಪಘಾತದಲ್ಲಿ ಅಲಂಕಾರು ನಡ್ತಿಲ ನಿವಾಸಿ ಲೋಕೇಶ್ (42) ಎಂಬ ಬೈಕ್ ಸವಾರ ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದು ಉಪ್ಪಿನಂಗಡಿ ಕಡೆಗೆ ಪರಾರಿಯಾಗಿದ್ದ ಕಾರಿಗಾಗಿ ಸ್ಥಳೀಯ ಯುವಕರು ಆತೂರು, ರಾಮಕುಂಜ, ಕೊಯಿಲಾ, ನೆಲ್ಯಾಡಿ ಭಾಗಗಳಲ್ಲಿ ಜಾಲ ಬೀಸಿದ್ದರು. ಕೊನೆಗೆ ನಡುಗುಡ್ಡೆಯ ಮನೆಯೊಂದರ ಸಿಸಿಟಿವಿಯಲ್ಲಿ ವಾಹನದ ಚಲನವಲನ ಕಂಡುಬಂದಿದ್ದು, ಪರಿಶೀಲಿಸಿದಾಗ ಅದೇ ಮನೆಯ ಅಂಗಳದಲ್ಲಿ ಥಾರ್ ಜೀಪ್ ಪತ್ತೆಯಾಗಿದೆ. ಸ್ಥಳೀಯ ಹೋಟೆಲ್ ಉದ್ಯಮಿಯೊಬ್ಬರಿಗೆ ಸೇರಿದ ಈ ವಾಹನವನ್ನು ಅಪಘಾತದ ವೇಳೆ ಅವರ ಸಹೋದರ ಚಲಾಯಿಸುತ್ತಿದ್ದರೆನ್ನಲಾಗಿದೆ.

ಸ್ಥಳದಲ್ಲಿ ಉದ್ವಿಗ್ನತೆ ಸೃಷ್ಟಿಯಾಗುತ್ತಿದ್ದಂತೆ ಕಡಬ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್, ಹೆಚ್ಚುವರಿ ಎಸ್ಪಿ ಭೂಮರೆಡ್ಡಿ, ಡಿವೈಎಸ್ಪಿ ರೋಹಿಣಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮೃತ ಲೋಕೇಶ್ ಅವರು ಪತ್ನಿ, ಮಗ ಹಾಗೂ ಮಗಳನ್ನು ಅಗಲಿದ್ದಾರೆ.




